

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಟೌನ್‌ಶಿಪ್‌ಗಾಗಿ ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 36 ಗ್ರಾಮಗಳ 18,500 ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಆಗ್ರಹಿಸಿದ್ದಾರೆ.
ಹೊಸಕೋಟೆ ಹೊರವಲಯದ ಗರುಡಾಚಾರ್‌ಪಾಳ್ಯದ ಗೃಹಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2006-07 ರಲ್ಲಿ ಅಂದಿನ ಸಮ್ಮಿಶ್ರ ಸರ್ಕಾರ ನಂದಗುಡಿ ಹೋಬಳಿಯನ್ನು ಎಸ್‌ಇಝಡ್ ಹಾಗೂ ಉಪನಗರ (ಟೌನ್‌ಶಿಪ್) ಮಾಡಲು ಹೊರಟಾಗ ಸ್ಥಳೀಯ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಮೂಲಕ ವಿರೋಧಿಸಿದ್ದೆವು. ರೈತರ ಹಾಗೂ ಜನಪ್ರತಿನಿಧಿಗಳ ಪ್ರತಿಭಟನೆಗೆ ಬೆಚ್ಚಿದ ಆಗಿನ ಸರ್ಕಾರ ಸುಮ್ಮನಾಗಿತ್ತು. ಇದೀಗ ಮತ್ತೆ ವರಸೆ ತೆಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿನ ರೈತರು ಕೃಷಿ, ಹೈನುಗಾರಿಕೆ, ಕೂಲಿಯಿನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ, ಬೆಂಗಳೂರಿಗೆ ಅತಿ ಹೆಚ್ಚು ತರಕಾರಿ ಸರಬರಾಜು ಆಗುತ್ತಿರುವುದೂ ನಂದಗುಡಿ ಹೋಬಳಿಯಿಂದಲೇ ಎಂಬುದು ತಿಳಿದ ವಿಷಯ, ರಿಯಲ್ ಎಸ್ಟೇಟ್ ಮಾಫಿಯಾ ಜತೆ ಕೈಜೋಡಿಸಿ ಕೃಷಿ ಭೂಮಿಯನ್ನು ಹಾಳು ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.
ರೈತ ಕುಟುಂಬ ಬೀದಿಗೆ:
ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶ ಇರುವುದರಿಂದ ಹೆಚ್ಚಿನ ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ., 1 ರಿಂದ 3 ಎಕರೆ ಜಮೀನನ್ನು ಮಾತ್ರ ಹೊಂದಿರುತ್ತಾರೆ. ಇದನ್ನು ಸ್ವಾಧೀನಪಡಿಸಿಕೊಂಡಲ್ಲಿ ರೈತ ಕುಟುಂಬಗಳು ಬೀದಿಗೆ ಬೀಳಬೇಕಾಗುತ್ತದೆ. ಈ ಪ್ರದೇಶದಲ್ಲಿ ಜಮೀನಿಗೆ ಕೋಟ್ಯಂತರ ರೂ.ಮೌಲ್ಯವಿದೆ, ಅಭಿವೃದ್ಧಿಪಡಿಸಿ 0-8.1/2 ಗುಂಟೆ ಜಮೀನು ನೀಡುತ್ತೇವೆಂದು ಹೇಳುತ್ತಿರುವುದು ಅವೈಜ್ಞಾನಿಕವಾಗಿದ್ದು ವ್ಯವಸಾಯ ನಂಬಿಕೊಂಡಿದ್ದ ಸಾವಿರಾರು ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಂಟಿಬಿ ಆತಂಕ ವ್ಯಕ್ತಪಡಿಸಿದರು. ಈ ಹಿಂದೆ ಇದರ ವಿರುದ್ಧ ಪ್ರತಿಭಟನೆ ನಡೆಸಿದಾಗ ಪ್ರಸ್ತುತ ರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಎಚ್.ಕೆ.ೆ ಪಾಟೀಲ್ ಪಾಲ್ಗೊಂಡು ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದೆಂದು ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರವೇ ಲೂಟಿ ಮಾಡುವ ಉದ್ದೇಶದಿಂದ ಈ ಯೋಜನೆಗೆ ಕೈಹಾಕಿದೆ ಎಂದು ದೂರಿದರು.
ತಾಲೂಕಿನಲ್ಲಿ ತೀವ್ರ ಹೋರಾಟ:
ಫಲವತ್ತಾದ ಜಮೀನುಗಳನ್ನು ಉಳಿಸುವ ಹಾಗೂ ರೈತರ ಹಿತ ಕಾಯುವ ನಿಟ್ಟಿನಲ್ಲಿ ನಾವೆಲ್ಲರೂ ಈ ಹಿಂದೆ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ಅಂದಿನ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಈಗಾಗಲೇ ರೈತರು ಹೋರಾಟ ಆರಂಭಿಸಿದ್ದಾರೆ, ಅಂದಿನಂತೆ ಈಗಲೂ ನಾವು ರೈತರಿಗೆ ಬೆಂಗಾವಲಾಗಿ ನಿಂತು ರೈತರ ಹಿತಾಸಕ್ತಿ ಕಾಪಾಡಲು ಹಾಗೂ ಅವರ ಭೂಮಿ ಉಳಿಸಲು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಸಾಮಾಜಿಕ ಸಂಸ್ಥೆಗಳು, ಸಾರ್ವಜನಿಕರು ರೈತರೊಂದಿಗೆ ಹೋರಾಟ ನಡೆಸುತ್ತೇವೆ. ಹಾಗೂ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.