ಕೆಜಿಎಫ್‍ನ ಚಿನ್ನದ ಗಣಿ ಗ್ರಾಮದಲ್ಲಿ ತಲೆ ಎತ್ತಲಿದೆ ಕೈಗಾರಿಕೆ ಟೌನ್ ಶಿಪ್…

kgf murugesh nirani
Published on

ಬೆಳಗಾವಿ: ಕೆಜಿಎಫ್‍ನಲ್ಲಿ ಬಿಇಎಂಎಲ್ ಸಂಸ್ಥೆಯ ಬಳಕೆ ಮಾಡದ 967 ಎಕರೆ ಜಾಗದಲ್ಲಿ ಕೈಗಾರಿಕೆ ಟೌನ್ ಶಿಪ್ ಮಾಡುವ ಕುರಿತು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವರಿಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಧಾನಪರಿಷತ್‍ಗೆ ಮಂಗಳವಾರ ತಿಳಿಸಿದರು.

ಸದಸ್ಯ ಗೋವಿಂದರಾಜು ಪರವಾಗಿ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಜಿಎಫ್ ತಾಲೂಕಿನ ಬಂಗಾರದ ಗಣಿ ಗ್ರಾಮದಲ್ಲಿ ರಾಜ್ಯ ಸರ್ಕಾರವು ಬಿಇಎಂಎಲ್ ಕಾರ್ಖಾನೆ ಸ್ಥಾಪಿಸಲು ಸುಮಾರು 1870.30 ಎಕರೆ ಜಮೀನು ಉದ್ದೇಶಿತ ಸಂಸ್ಥೆಗೆ ಉಪಯೋಗಿಸಿಕೊಂಡು ಬಾಕಿ ಉಳಿದಿರುವ 971.33 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ಅನ್ವಯ ಎಲ್ಲಾ ಋಣ ಭಾರದಿಂದ ಮುಕ್ತಗೊಳಿಸಿ ಕಂದಾಯ ಇಲಾಖೆಗೆ ವಶಪಡಿಸಿಕೊಳ್ಳಲು ಕೋಲಾರ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ ಎಂದು ಹೇಳಿದರು.

ಕೆಜಿಎಫ್‍ನಲ್ಲಿನ 13 ಸಾವಿರ ಎಕರೆ ಜಮೀನನ್ನು ಚಿನ್ನದ ಗಣಿಗಾರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಈಗ ಗಣಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಹೆಚ್ಚುವರಿಯಾಗಿ ಉಳಿದಿರುವ ಭೂಮಿಯನ್ನು ವಾಪಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರದ ಜತೆ ಸಂವಹನ ನಡೆಸಲಾಗಿತ್ತು. ಆರಂಭದಲ್ಲಿ 3500 ಎಕರೆಯನ್ನು ಮರಳಿ ಕೊಡುತ್ತೇವೆ ಎಂದು ಕೇಂದ್ರ ತಿಳಿಸಿತ್ತು. ಅದಕ್ಕೆ ಪೂರಕವಾಗಿ ಸ್ಪಷ್ಟವಾದ ಚಕ್ಕುಬಂದಿ ತಿಳಿಸಲು ಸೂಚಿಸಲಾಗಿತ್ತು. ರಾಜ್ಯ ಸರ್ಕಾರ ಸರ್ವೇ ನಡೆಸಿದಾಗ ಬಹಳಷ್ಟು ಭೂಮಿ ಒತ್ತುವರಿಯಾಗಿರುವುದು ಕಂಡುಬಂತು ಎಂದು ಹೇಳಿದರು.

ಕೆಲವರು ಅಲ್ಲಿ ಮನೆಗಳನ್ನು ನಿರ್ಮಿಸಿರುವುದನ್ನು ಜಿಲ್ಲಾಧಿಕಾರಿ ಗುರುತಿಸಿದ್ದಾರೆ. ಸರ್ವೇ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದಾಗ ಅಲ್ಲಿನ ಸಮಿತಿ ಚರ್ಚೆ ನಡೆಸಿ, ಕೇವಲ 3500 ಎಕರೆಯನ್ನಷ್ಟೇ ಅಲ್ಲ ಪೂರ್ತಿ ಭೂಮಿಯನ್ನು ವಾಪಸ್ ನೀಡುತ್ತೇವೆ. ಸಾಲದ ಹೊಣೆಗಾರಿಕೆಯೊಂದಿಗೆ ಭೂಮಿಯನ್ನು ವಾಪಸ್ ತೆಗೆದುಕೊಳ್ಳಿ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ ಎಂದು ನಿರಾಣಿ ಹೇಳಿದರು.

ಭೂಮಿಯ ಮೌಲ್ಯಕ್ಕಿಂತ ಸಾಲವೇ ಹೆಚ್ಚಿದೆ. ಅದಕ್ಕಾಗಿ ಒಮ್ಮೆಲೇ ಎಲ್ಲ ಭೂಮಿ ಬೇಡ. ಮೊದಲ ಹಂತದಲ್ಲಿ 3500 ಎಕರೆ ಮಾತ್ರ ನೀಡಿ. ನಂತರ ಎರಡನೇ ಹಂತದಲ್ಲಿ ಉಳಿದ ಭೂಮಿ ಪಡೆದುಕೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರ ಸಲಹೆ ನೀಡಿದೆ. ಈ ಸಂವಹನದ ನಂತರ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ. ಬೆಮೆಲ್‍ನಲ್ಲಿ ಹೆಚ್ಚುವರಿಯಾಗಿ 967 ಎಕರೆ ಭೂಮಿ ಕಂದಾಯ ಇಲಾಖೆ ಅಧೀನದಲ್ಲಿದೆ. ಅದನ್ನು ವಾಪಸ್ ಪಡೆದು ಕೈಗಾರಿಕೆಗಳಿಗೆ ಹಂಚಿಕೆ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಕಂದಾಯ ಇಲಾಖೆಯಿಂದ ಈವರೆಗೂ ಭೂಮಿ ಹಸ್ತಾಂತರವಾಗಿಲ್ಲ. ಭೂಮಿ ನಮ್ಮ ಇಲಾಖೆಗೆ ಬರುತ್ತಿದ್ದಂತೆ ಕೈಗಾರಿಕೆಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net