

ಮೂಗೂರು: ಮನುಷ್ಯನ ದುರಾಸೆ ಮತ್ತು ದೂರಾಲೋಚನೆಯಿಂದ ಸಸ್ಯ ಸಂಕುಲ ವಿನಾಶದ ಹಾದಿ ಹಿಡಿದಿದೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಪಿಯು ಕಾಲೇಜು ಮುಖ್ಯಸ್ಥ ಬಿ.ಮಹೇಶ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಡು ಇದ್ದರೆ ನಾಡು ಎಂಬುದು ಮರೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಪಟ್ಟಣದ ಜನರು ಜೀವನದಲ್ಲಿ ಹತಾಶೆಗೊಂಡು ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ ಎಂದರು.
ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆ ಹೊಣೆಗಾರಿಕೆ ಅರಿಯದ ನಾಗರಿಕರು ಕೃತಕ ಉಸಿರಾಟದ ಮೂಲಕ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅರಣ್ಯ ಸಂಪತ್ತನ್ನು ನಾಶ ಮಾಡುವುದರಿಂದ ಮಾನವ ಸಂಪತ್ತು ವಿನಾಶದತ್ತ ತಲುಪಲಿದೆ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
ಶಾಲೆ ಆವರಣದಲ್ಲಿ ಹಾಕಲಾಗಿದ್ದ ಕೆಲವು ಗಿಡಗಳನ್ನು ಮಕ್ಕಳು ದತ್ತು ಪಡೆದು ಪೋಷಣೆಯ ಜವಾಬ್ದಾರಿ ಪಡೆದರು.ದೈಹಿಕ ಶಿಕ್ಷಕ ಮಲ್ಲೇಶ್, ಶಿಕ್ಷಕರಾದ ರಮೇಶ್, ಕೇಶವ್, ಶೈಲಜಾ, ಮಮತಾ ಇತರರಿದ್ದರು.