ವಿದ್ಯುತ್ ತಗುಲಿ ಪಪಂ ಗುತ್ತಿಗೆ ನೌಕರ ಸಾವು

Town Panchayati contract worker dies after being electrocuted
Published on

ಹಿರೇಕೆರೂರ: ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಟ್ಯಾಂಕ್ ನಿರ್ವಣದ ಅಡಿಪಾಯದ ಗುಂಡಿಯಲ್ಲಿದ್ದ ನೀರು ಮೇಲೆತ್ತಲು ಮೋಟರ್ ಚಾಲು ಮಾಡುವ ವೇಳೆ ವಿದ್ಯುತ್ ತಗುಲಿ ಪಪಂ ಗುತ್ತಿಗೆ ನೌಕರ ಮೃತಪಟ್ಟ ಘಟನೆ ಪಟ್ಟಣದ ಬಿ.ಜಿ. ಬಣಕಾರ ಬಡಾವಣೆಯಲ್ಲಿ ನಡೆದಿದೆ.

ಪಟ್ಟಣದ ಬಿ.ಜಿ. ಬಣಕಾರ ಬಡಾವಣೆ ನಿವಾಸಿ ಸಂತೋಷ ಶೇಖಪ್ಪ ದಾಸನಕೊಪ್ಪ (29) ಮೃತ ನೌಕರ. ಜಲ ಶುದ್ಧೀಕರಣ ಘಟಕದ ಪಕ್ಕದಲ್ಲಿ 24*7 ನೀರು ಸರಬರಾಜು ಯೋಜನೆಯ ಟ್ಯಾಂಕ್ ನಿರ್ವಿುಸಲು ತಳಪಾಯದ ಕಾಮಗಾರಿ ನಡೆಯುತ್ತಿತ್ತು. ಇದರ ಪಕ್ಕದಲ್ಲಿ ಸುಣ್ಣದ ಕಾಲುವೆ ಹಾಯ್ದು ಹೋಗಿದ್ದರಿಂದ, ಅಲ್ಲಿನ ನೀರು ಬಸಿದು ಟ್ಯಾಂಕ್ ಕಾಮಗಾರಿ ಸ್ಥಳದಲ್ಲಿ ಜಮೆಯಾಗಿತ್ತು. ಇದರಿಂದ ಕಾಮಗಾರಿಗೆ ಅಡ್ಡಿಯಾಗಿತ್ತು. ಪಪಂನಲ್ಲಿ 10 ವರ್ಷಗಳಿಂದ ವಾಟರ್​ವುನ್ ಆಗಿದ್ದ ಸಂತೋಷನಿಗೆ ಗುಂಡಿಯಲ್ಲಿರುವ ನೀರು ಹೊರ ತೆಗೆಯಲು ಕಾಮಗಾರಿ ಗುತ್ತಿಗೆದಾರರು ತಿಳಿಸಿದ್ದರು. ಅದರಂತೆ ಸಂತೋಷ ಬುಧವಾರ ಬೆಳಗ್ಗೆ 5.30 ಗಂಟೆಗೆ ತಗಡಿನ ಶೆಡ್​ನಲ್ಲಿ ಅಳವಡಿಸಿದ್ದ ವಿದ್ಯುತ್ ಬೋರ್ಡ್​ಗೆ ಸ್ವಿಚ್ ಹಾಕುವ ವೇಳೆ ವಿದ್ಯುತ್ ತಗುಲಿ ಮೃತಪದಟ್ಟಿದ್ದಾನೆ. ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥರ ಆಕ್ರಂದನ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸುವವರೆಗೆ ಮೃತದೇಹ ಮೇಲೆತ್ತುವುದಿಲ್ಲ ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಪಟ್ಟು ಹಿಡಿದಿದ್ದರು. ಪಪಂ ಉಪಾಧ್ಯಕ್ಷ ರಾಜು ಕರಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಮುಖ್ಯಾಧಿಕಾರಿ ಕೋಡಿ ಭೀಮರಾಯ್, ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ರಮೇಶ ತೋರಣಗಟ್ಟಿ, ಬಸವರಾಜ ಕಟ್ಟಿಮನಿ ಸೇರಿದಂತೆ ಹಿರಿಯರು ಮನವೊಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗೆ ಸಾಗಿಸಿ, ಅಂತ್ಯ ಸಂಸ್ಕಾರ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net