ಮೊಳಕಾಲ್ಮೂರು ಪಪಂ ಗದ್ದುಗೆ ಬಿಜೆಪಿ ವಶ

mlk pp election
Published on

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ 2ನೇ ಅವಧಿಗೆ ಅಧ್ಯಕ್ಷೆಯಾಗಿ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಆಯ್ಕೆಯಾದರು.
ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ನಿರೀಕ್ಷೆಯಂತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು.

ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಲೀಲಾವತಿ ಸಿದ್ದಣ್ಣ, ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಟಿ.ಜಗದೀಶ್ ಕಾರ್ಯನಿರ್ವಹಿಸಿದರು.

16 ಸದಸ್ಯರ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 10, ಕಾಂಗ್ರೆಸ್ 6 ಜನ ಸದಸ್ಯರಿದ್ದಾರೆ. ಅಧಿಕಾರ ಹಿಡಿಯುವ ಸಾಹಸಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಕೈಹಾಕದ ಕಾರಣ ಬಿಜೆಪಿಗೆ ದಾರಿ ಸುಗಮವಾಯಿತು. ಬಿಜೆಪಿ ಪರವಾಗಿ ಸಂಸದ ಗೋವಿಂದ ಎಂ.ಕಾರಜೋಳ ಹಾಜರಾಗಿ ಕೈಎತ್ತುವ ಮೂಲಕ ಎಲ್ಲರ ಗಮನ ಸೆಳೆದರು.

ಕಾಂಗ್ರೆಸ್ ಪೈಪೋಟಿ: ಬಿಜೆಪಿಗೆ ಸ್ಪಷ್ಟ ಬಹುತವಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ವಿಜಯಲಕ್ಷ್ಮಿ ಓಬಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಅಬ್ದುಲ್ಲಾ ನಾಮಪತ್ರ ಸಲ್ಲಿಸಿದ್ದರು. ಸಂಸದರ ಮತ ಸೇರಿ ಬಿಜೆಪಿ ಪರ 11, ಕಾಂಗ್ರೆಸ್ ಪರ 6 ಮಂದಿ ಸದಸ್ಯರು ಕೈ ಎತ್ತಿ ಮತ ಚಲಾಯಿಸಿದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಶೂನ್ಯ. ಮುಂದಿನ ದಿನಗಳಲ್ಲಿ ರಾಜ್ಯದ ಜನ ತಕ್ಕಪಾಠ ಕಲಿಸಲು ಕಾತುರದಲ್ಲಿದ್ದಾರೆ. ಅತ್ಯಂತ ಹಿಂದುಳಿದ ಚಿತ್ರದುರ್ಗ ಜಿಲ್ಲೆಗೆ ಶಾಶ್ವತ ನೀರಾವರಿ ಮೂಲ ಕಲ್ಪಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಯತ್ನಿಸಲಾಗಿತ್ತು ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಮೀಸಲಿಡಲಾಗಿತ್ತು. ಯೋಜನೆ ತ್ವರಿತವಾಗಿ ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರ ಬದ್ಧತೆ ಇರಿಸಿಕೊಂಡಿದೆ. ಆದರೆ, ರಾಜ್ಯ ಸರ್ಕಾರದ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ ಎಂದು ದೂರಿದರು.

ಬಾಕಿ ಇರುವ 5300 ಕೋಟಿ ರೂ. ಗಳನ್ನು ಕೇಂದ್ರ ಬಿಡುಗಡೆ ಮಾಡಲು ಸಿದ್ಧವಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ನಡೆದುಕೊಳ್ಳದೆ ಉದಾಸೀನ ತೋರಿದೆ ಎಂದು ಆರೋಪ ಮಾಡಿದರು.

ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ರಾಮರೆಡ್ಡಿ, ಚಂದ್ರಶೇಖರಗೌಡ್ರು, ಗೋವಿಂದಪ್ಪ, ಪಪಂ ಸದಸ್ಯರಾದ ಪಿ.ಲಕ್ಷ್ಮಣ, ಟಿ.ರವಿಕುಮಾರ, ಶುಭಾ ಪೃಥ್ವಿರಾಜ್, ರೂಪಾ, ಭಾಗ್ಯಮ್ಮ, ಲಕ್ಷ್ಮೀದೇವಿ, ಕವಿತಾ, ಓಂಕಾರಮೂರ್ತಿ, ಕಿರಣ್, ಹರೀಶ್, ಪ್ರಭಾಕರ, ನಾಗರಾಜ್ ಇತರರಿದ್ದರು.

ಮೊಳಕಾಲ್ಮೂರು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆ ಇರಲಿಲ್ಲ. ಆದರೂ ಊರೂರು ಸುತ್ತಿ ಪಕ್ಷವನ್ನು ಸಂಘಟಿಸಿದ ಪರಿಣಾಮ ಇತಿಹಾಸದಲ್ಲಿ ಪಪಂ ಅಧಿಕಾರ ಬಿಜೆಪಿ ವಶಕ್ಕೆ ಬಂದಿದೆ. ಮುಂಬರುವ ಯಾವುದೇ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮುಂದೆ ಕಾಂಗ್ರೆಸ್ ಆಟ ನಡೆಯುವುದಿಲ್ಲ.ಎಸ್.ತಿಪ್ಪೇಸ್ವಾಮಿ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net