

ವಿಜಯವಾಣಿ ಸುದ್ದಿಜಾಲ ಆನೇಕಲ್
ಬಳ್ಳೂರಿನಲ್ಲಿ ಗುರುವಾರ ಗ್ರಾಮದೇವತೆಗಳ ಊರ ಹಬ್ಬ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಹಬ್ಬದ ಅಂಗವಾಗಿ ಗ್ರಾಮ ದೇವತೆಗಳ ಮೆರವಣಿಗೆ ಹಾಗೂ ಮಾರಮ್ಮ ದೇವಿಗೆ ಮಹಾಗಣಪತಿ ಹೋಮ, ದುರ್ಗಾ ಹೋಮ ನೆರವೇರಿಸಲಾಯಿತು.
ಮಾರಮ್ಮ ದೇವಿಗೆ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಗ್ರಾಮದ ಮಹಿಳೆಯರು ಪೂಜೆ ನೆರವೇರಿಸಿದರು.
ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದ ಆರತಿ, ವೀರಗಾಸೆ ಕುಣಿತ, ಅಗ್ನಿಕೊಂಡ, ವಿಶೇಷ ಪೂಜೆ, ಮಹಾ ಮಂಗಳಾರತಿ, ಮಾರಮ್ಮ ದೇವಿ, ಮುತ್ಯಾಲಮ್ಮದೇವಿ, ಪಿಳ್ಳೆಕಮ್ಮ ದೇವಿ, ಸಪ್ಪಲಮ್ಮ ದೇವಿ, ಪಟಾಲಮ್ಮ ದೇವಿ ಮತ್ತು ಮುನೇಶ್ವರ ಸ್ವಾಮಿಗೆ ದೀಪಾರತಿ ಮಾಡಲಾಯಿತು.
ಊರ ಹಬ್ಬದ ಅಂಗವಾಗಿ ಎಲ್ಲ ದೇಗುಲಗಳಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಅನ್ನಸಂತರ್ಪಣೆ ನಡೆಯಿತು.
ಬಿಜೆಪಿ ಮುಖಂಡ ಬಳ್ಳೂರು ವಸಂತ ರೆಡ್ಡಿ ಮಾತನಾಡಿ, ಗ್ರಾಮದ ಎಲ್ಲರೂ ಸೇರಿ ಈ ಬಾರಿ ಊರ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಗ್ರಾಮ ದೇವತೆಗಳು ಹಾಗೂ ಊರಿನ ಉತ್ಸಮ ಮೂರ್ತಿಗಳನ್ನು ಪೂಜಿಸಲಾಗಿದ್ದು, ವಿಶೇಷವಾಗಿ ಮಹಿಳೆಯರು ಉತ್ಸವದಲ್ಲಿ ಪಾಲ್ಗೊಂಡು ಮೆರಗು ತಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಮಳೆ ಬೆಳೆ ಉತ್ತಮವಾಗಿ ನಡೆಯಲಿ, ಗ್ರಾಮದ ಎಲ್ಲರನ್ನೂ ಕಾಪಾಡಲಿ ಎಂಬ ಪ್ರಾರ್ಥನೆಯೊಂದಿಗೆ ಹಬ್ಬವನ್ನು ಆಚರಿಸಲಾಗಿದೆ ಎಂದರು.