

ಕೆ.ಆರ್.ನಗರ: ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಪುರಸಭೆ ಸದಸ್ಯರೆಲ್ಲರೂ ನಮಗೆ ಸಂಪೂರ್ಣ ಸಹಕಾರ ನೀಡಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಶಿವುನಾಯಕ್ ಮನವಿ ಮಾಡಿದರು.
ಪುರಸಭೆಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬೇಸಿಗೆ ಸಮಯ ಸಮೀಪಿಸುತ್ತಿರುವುದರಿಂದ ನೀರಿನ ಸಮಸ್ಯೆ ತಲೆದೋರಲಿದೆ. ಆದ್ದರಿಂದ ನೀರಿನ ಮಿತ ಬಳಕೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳ ಜತೆ ಸದಸ್ಯರು ಕೂಡ ಪಕ್ಷಾತೀತವಾಗಿ ಮಾಡಿ ಜಲ ಸಂರಕ್ಷಣೆ ಮಾಡಬೇಕು ಎಂದರು.
20 ತಿಂಗಳಿನಿಂದ ಪುರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲದಿದ್ದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿವೆ. ಮುಂದೆ ಚುನಾಯಿತ ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದರು. ಇದೇ ವೇಳೆ ಎಲ್ಲರೂ ಪಕ್ಷಬೇಧ ಮರೆತು ನೀರ್ಣಯ ಕೈಗೊಂಡರು.
ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಕೋಳಿಪ್ರಕಾಶ್, ತೋಂಟದಾರ್ಯ ಅವರು ಪುರಸಭೆಯ ಕಾನೂನು ಸಲಹೆಗಾರರು. ಈಗ ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸದಿರುವುದರಿಂದ ನಮಗೆ ಸಾಕಷ್ಟು ತೊಂದರೆಯಾಗಿದೆ. ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಒಕ್ಕೊರಲಿನಿಂದ ಬೆಂಬಲ ವ್ಯಕ್ತವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಟರಾಜು ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ ಒಮ್ಮತದ ತೀರ್ಮಾನ ತೆಗೆದುಕೊಳ್ಳಬಹುದು. ಇದಕ್ಕೆ ನಮ್ಮ ಯಾವುದೇ ಆಕ್ಷೇಪ ಇಲ್ಲ ಎಂದಾಗ ಮಧ್ಯಪ್ರವೇಶಿಸಿದ ಹಿರಿಯ ಸದಸ್ಯ ಕೆ.ಪಿ.ಪ್ರಭುಶಂಕರ್, ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ನಡೆಸುವವರು ವಿಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದಾಗ ಅಭಿವೃದ್ಧಿ ಕೆಲಸಗಳು ಸರಾಗವಾಗಿ ಸಾಗುತ್ತವೆ ಎಂದು ಸಲಹೆ ನೀಡಿದರು. ಇದಕ್ಕೆ ಸರ್ವ ಸದಸ್ಯರು ಬೆಂಬಲ ಸೂಚಿಸಿದರು.
ಒಂದು ವರ್ಷದಿಂದ 72 ವಾಣಿಜ್ಯ ಮಳಿಗೆಗಳು ಹರಾಜಾಗದೆ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿವೆ. ಇದರಿಂದ ಪುರಸಭೆಗೆ ಆದಾಯ ಖೋತಾ ಆಗುವುದರೊಂದಿಗೆ ವ್ಯಾಪಾರಗಾರರು ಬೀದಿಗೆ ಬಿದ್ದಿದ್ದು, ಈ ವಿಚಾರವನ್ನು ಸರ್ವರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸದಸ್ಯ ಕೋಳಿಪ್ರಕಾಶ್ ಸಲಹೆ ನೀಡಿದರು. ಇದಕ್ಕೆ ಸರ್ವ ಸದಸ್ಯರು ಧ್ವನಿಗೂಡಿಸಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದ ಮಳಿಗೆದಾರರಿಗೆ ಆದ್ಯತೆಯ ಮೇರೆಗೆ ಅವಕಾಶ ನೀಡಬೇಕು ತಿಳಿಸಿದರು.
ಸದಸ್ಯರ ಮನವಿಗೆ ಸ್ಪಂದಿಸಿದ ಅಧ್ಯಕ್ಷರು, ನಾವು ಸದಾ ಪುರಸಭೆಯ ಆದಾಯ ಮತ್ತು ವ್ಯಾಪಾರಗಾರರ ಪರವಾಗಿ ಕೆಲಸ ಮಾಡುತ್ತಿದ್ದು, ಮಾಧ್ಯಮದವರು ಮತ್ತು ಜನರ ಸಲಹೆಗೆ ಮನ್ನಣೆ ನೀಡಿ ಮುಂದಿನ ವಿಶೇಷ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಪ್ರಕಟಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಶಂಕರ್, ಪುರಸಭೆ ಉಪಾಧ್ಯಕ್ಷೆ ವಸಂತಮ್ಮ, ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಸೈಯದ್‌ಸಿದ್ದಿಕ್, ಉಮೇಶ್, ಕೆ.ಎಲ್.ಜಗದೀಶ್, ಶಂಕರ್‌ಸ್ವಾಮಿ, ಸೌಮ್ಯಾ ಲೋಕೇಶ್, ಶಾರದಾ ನಾಗೇಶ್, ವಹೀದಾಬಾನು, ಸಂತೋಷ್‌ಗೌಡ, ವೀಣಾ ವೃಷಬೇಂದ್ರ, ಮಂಜುಳಾ ಚಿಕ್ಕವೀರು, ಅಶ್ವಿನಿ ಪುಟ್ಟರಾಜು, ಪಲ್ಲವಿ ಆನಂದ್, ಜಾವೀದ್‌ಪಾಷ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಕಂದಾಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕರಾದ ಎಸ್.ಪಿ.ರಾಜೇಂದ್ರಕುಮಾರ್, ಎಚ್.ಎಸ್.ಲೋಕೇಶ್ ಮತ್ತಿತರರು ಇದ್ದರು.