

ಮಡಿಕೇರಿ:
ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 1.17 ಕೋಟಿ ರೂ. ಒಟ್ಟು ಲಾಭ ಗಳಿಸಿದ್ದು, ತೆರಿಗೆ ಮತ್ತು ಇತರ ಬಾಪ್ತುಗಳಿಗೆ ಕಾದಿರಿಸಿದ ನಂತರ 33.09 ಲಕ್ಷ ರೂ. ನಷ್ಟು ನಿವ್ವಳ ಲಾಭದಲ್ಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಜಿ.ಎಂ. ಸತೀಶ್ ಪೈ ತಿಳಿಸಿದ್ದಾರೆ. ಬ್ಯಾಂಕಿನ ವ್ಯವಹಾರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಲಾಭದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತಿದೆ. ಆರ್‌ಬಿಐ ನಿಯಮದಂತೆ ಬ್ಯಾಂಕ್ 16.90 ಕೋಟಿ ರೂ. ಸಾಲವನ್ನು ಆದ್ಯತಾ ವಲಯಕ್ಕೆ ಕೊಟ್ಟಿದೆ. ಈ ಸಾಲಿನಲ್ಲಿ ಒಟ್ಟು 4.81 ಕೋಟಿ ರೂ. ವ್ಯವಹಾರ ನಡೆಸಲಾಗಿದ್ದು, ಅನುತ್ಪಾದಕ ಆಸ್ತಿಯ ಪ್ರಮಾಣ ಅಧಿಕಗೊಂಡಿದೆ. ಸದ್ಯ ಇದು 1.28 ಕೋಟಿ ರೂ.ಗಳಷ್ಟಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳಾದ ಜಾಮೀನು ಸಾಲ, ಆಭರಣ ಸಾಲ, ಮನೆ ಖರೀದಿ ಸಾಲ, ವಾಹನ ಖರೀದಿ ಸಾಲ, ಪಿಗ್ಮಿ ಅಲ್ಪಾವಧಿ ಸಾಲಗಳನ್ನು ಕೊಡುತ್ತಿದೆ. ಈ ವರ್ಷ ಶೇ. 95.50ರಷ್ಟು ಪ್ರಮಾಣದಲ್ಲಿ ಸಾಲ ವಸೂಲಾತಿ ಆಗಿದೆ. ಬ್ಯಾಂಕ್‌ನಲ್ಲಿ ಠೇವಣಿ ಇಡುವವರಿಗೆ ಕನಿಷ್ಠ ಶೇ. 2ರಿಂದ ಗರಿಷ್ಠ ಶೇ. 7.25ರ ತನಕ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಮತ್ತು ಒಂದು ವರ್ಷ ಹಾಗೂ ಅದಕ್ಕಿಂತ ಜಾಸ್ತಿ ಅವಧಿಗೆ ಇಡುವ ಸಾಲಗಳಿಗೆ ಶೇ 0.50 ಯಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ನೀಡಲಾಗುತ್ತಿದೆ.
ಬ್ಯಾಂಕ್ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಬ್ಯಾಂಕ್‌ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ (ಸೆ.21) ಮಡಿಕೇರಿ ಕೊಡವ ಸಮಾಜದಲ್ಲಿ ನಡೆಸಲಾಗುತ್ತಿದ್ದು, ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಬ್ಯಾಂಕ್ ನಿರ್ದೇಶಕರಾದ ನಾಗೇಶ್, ಸಿ.ಕೆ. ಬಾಲಕೃಷ್ಣ, ಸತೀಶ್, ರಾಜೇಶ್, ಬಿ.ಎಂ. ಜಗದೀಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.