

ಗುಂಡ್ಲುಪೇಟೆ: ಪಟ್ಟಣದ ಬಸವೇಶ್ವರ ಕಮ್ಯೂನಿಟಿ ಹಾಲ್‌ನಲ್ಲಿ ಬುಧವಾರ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, 150 ಜನ ಇದ್ದ ಸಂಘದ ಸದಸ್ಯರ ಸಂಖ್ಯೆ ಈಗ ಮೂರು ಸಾವಿರ ಮೀರಿದೆ. ಸಂಘದ ಸದಸ್ಯರು, ಆಡಳಿತ ಮಂಡಳಿಯ ಎಲ್ಲ ಸದಸ್ಯರು, ನೌಕರರ ವರ್ಗದವರು ಸಮನ್ವಯದಿಂದ ಕೆಲಸ ಮಾಡುತ್ತಿರುವ ಕಾರಣ ಸಂಘವು ಉತ್ತಮ ಆರ್ಥಿಕ ವಹಿವಾಟು ನಡೆಸುತ್ತಿದೆ. ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿದೆ. ಸಂಘವು ಪ್ರಸಕ್ತ ಸಾಲಿನಲ್ಲಿ 18 ಲಕ್ಷ ರೂ. ಆದಾಯ ಗಳಿಸಿದೆ ಎಂದು ಮಾಹಿತಿ ನೀಡಿದರು.
ಸಹಕಾರ ಸಂಘವು ಇದೇ ರೀತಿಯಲ್ಲಿ ಪ್ರಗತಿಯತ್ತ ಸಾಗಲು ಸಂಘದಲ್ಲಿ ಸಾಲ ಪಡೆದ ಎಲ್ಲರೂ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಇತರ ಸದಸ್ಯರು ಸಾಲ ಪಡೆಯಲು ಅನುಕೂಲ ಆಗುವಂತೆ ಮಾಡಬೇಕು. ಎಲ್ಲ ಸದಸ್ಯರು ಯಶಸ್ವಿನಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಹಕಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಸಂಘದ ಸದಸ್ಯರು ಕಣ್ಣು ಮತ್ತು ಬಿಪಿ ಶುಗರ್ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ರಾಧಮಣಿ, ನಿರ್ದೇಶಕರಾದ ಚಂದ್ರಶೇಖರ್, ವೆಂಕಟೇಶ್, ಮಧು, ಎಂ.ಚೇತನ್‌ಕುಮಾರ್, ಆರ್.ಎಂ.ಮಹದೇವೇಗೌಡ, ಮಂಜುನಾಥ್, ಶಿವನಾಗಪ್ಪ, ಎನ್.ಕುಮಾರ್, ಮುಜಬುನ್ನಿಸಾ, ಬ್ಯಾಂಕ್‌ನ ಪ್ರತಿನಿಧಿ ಕಾರ್ತಿಕ್, ಸಂಘದ ಸಿಇಒ ಪಿ.ವನಿತ, ಮೋಹನಕುಮಾರಿ, ಟಿ.ಜಿ.ಪುಷ್ಪವತಿ, ಸಿ.ಎನ್.ಪೂರ್ಣಿಮಾ, ಜಿ.ಕೆ.ಸುನೀಲ್, ಮಹದೇವನಾಯಕ, ರವಿ ಇದ್ದರು.