

ವಿಜಯವಾಣಿ ಸುದ್ದಿಜಾಲ ಉಡುಪಿ
ಗುಜರಾತ್‌ನಿಂದ ಶ್ರೀಲಂಕಾದ ಕೊಲಂಬೋಕ್ಕೆ ತೆರಳುತ್ತಿದ್ದ ‘ಎಂವಿ ವಾರ್ಸ್ಕ್ ಫ್ರಾಂಕ್‌ಫರ್ಟ್ ಕಾರ್ಗೋ ಕಂಟೇನರ್’ ಹಡಗಿಗೆ ತಗುಲಿದ್ದ ಬೆಂಕಿ ನಂದಿಸಲಾಗಿದ್ದು, ಇದೀಗ ಸುರತ್ಕಲ್‌ನಿಂದ 23 ನಾಟಿಕಲ್ ಮೈಲ್ ದೂರದಲ್ಲಿ (ಎನ್‌ಎಂಪಿಟಿ ಬಳಿ) ನಿಲ್ಲಿಸಲಾಗಿದೆ.
ಜಪಾನ್ ಮಾಲೀಕತ್ವದ, ಪನಾಮಾ ್ಲಾಗ್ ಹಾಗೂ ನೋಂದಣಿ ಹೊಂದಿರುವ ಈ ಹಡಗು, ಜುಲೈ 19ರಂದು ಅಗ್ನಿ ಅವಘಡಕ್ಕೆ ತುತ್ತಾಗಿದ್ದರೂ ಸಮುದ್ರದಲ್ಲಿ ಚಲಿಸುತ್ತಲೇ ಇತ್ತು. ಭಾರತೀಯ ಕೋಸ್ಟ್ ಗಾರ್ಡ್(ಐಸಿಜಿ) ಸತತ ಐದಾರು ದಿನಗಳಿಂದ ಅಗ್ನಿ ಶಮನ ಕಾರ್ಯ ನಡೆಸಿದ್ದರು. ಬೆಂಕಿ ಹೊತ್ತಿಕೊಂಡಿದ್ದರೂ ಸಂಚರಿಸುತ್ತಲೇ ಬಂದ ಹಡಗು ಜುಲೈ 24ರಂದು ಮಂಗಳೂರು ಸಮೀಪದ ಸುರತ್ಕಲ್ ಸಮುದ್ರದಲ್ಲಿ ನಿಂತಿತ್ತು.
ಬೆಂಕಿಯನ್ನು ನಂದಿಸಲಾಗಿದ್ದರೂ, ಹಡಗು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಹಡಗಿನ ಸದಸ್ಯದ ಸ್ಥಿತಿಗತಿಯ ಕುರಿತಾಗಿ ಸಾಲ್ವೆಜ್ ತಂಡ ಪರಿಶೀಲನೆ ನಡೆಸುತ್ತಿದೆ. ಅವಘಡ ಸಂಭವಿಸಿದರೂ ರಕ್ಷಣಾ ಕಾರ್ಯ ನಡೆಸಲು ಅನುಕೂಲವಾಗಲೆಂಬ ದೃಷ್ಟಿಯಿಂದ ಹಾಗೂ ಬಂದರಿಗೆ ಸಮೀಪದಲ್ಲಿ ಇರಲೆಂದು ಈ ಮೊದಲು ಸುರತ್ಕಲ್ ಸಮುದ್ರದಿಂದ 33 ನಾಟಿಕಲ್ ಮೈಲ್ ದೂರದಲ್ಲಿ ನಿಂತಿದ್ದ ಹಡಗನ್ನು ಇನ್ನೂ 10 ಮೀಟರ್ ಸಮೀಪ(23 ನಾಟಿಕಲ್ ಮೈಲ್ ದೂರ) ತರಲಾಗಿದೆ.
ಬೆಂಕಿ ನಂದಿಸಿದ್ದರಿಂದ ಹಡಗಿನಲ್ಲಿರುವ ಕೋಟ್ಯಂತರ ರೂ. ಮೌಲ್ಯದ ವಸ್ತುವನ್ನು ಕೊಲಂಬೋ ಪೋರ್ಟ್‌ಗೆ ಸಾಗಿಸಲು ಹಡಗಿನ ಮಾಲೀಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಶಾರ್ಜಾದಿಂದ ಟೋಯಿಂಗ್ ಟಗ್ಸ್ ತರಿಸುತ್ತಿದ್ದು, ಇಂದು ಅಥವಾ ನಾಳೆಯೊಳಗೆ ಆಗಮಿಸಲಿದೆ. ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲದಿದ್ದರೆ ಅಥವಾ ಹಡಗು ಸಂಚರಿಸಲು ಸಾಧ್ಯವಿಲ್ಲದಿದ್ದರೆ ಟೋಯಿಂಗ್ ಟಗ್ಸ್ ಮೂಲಕ ಎಳೆದುಕೊಂಡು ಹೋಗುವ ಚಿಂತನೆ ಮಾಡಲಾಗಿದೆ.
ಹಡಗಿಗೆ ತಗುಲಿದ್ದ ಬೆಂಕಿ ನಂದಿಸಿದರೂ, ಭಾರಿ ತಾಪದಿಂದ ಹೊಗೆ ಬರುತ್ತಿದೆ. ಹೀಗಾಗಿ ಹಡಗಿನ ಸುತ್ತಮುತ್ತ ಬೌಂಡ್ರಿ ಕೂಲಿಂಗ್ ಕಾರ್ಯವೂ ನಡೆದಿದೆ. ಒಟ್ಟಿನಲ್ಲಿ ಹಡಗಿಗೆ ಮತ್ತೆ ಬೆಂಕಿ ಬೀಳದಂತೆ, ಹಡಗಿನೊಳಗೆ ಕಂಟೇನರ್‌ನಲ್ಲಿ ಇರುವ ತೈಲ ಸೋರಿಕೆ ಆಗದಂತೆ ಹಾಗೂ ಹಡಗು ಮುಳುಗಡೆಯೂ ಆಗದಂತೆ ರಕ್ಷಣಾ ಕಾರ್ಯ ನಡೆದಿದೆ.
ಹಡಗಿನಲ್ಲಿ ಪರಿಸರಕ್ಕೆ ಹಾನಿಯಾಗಬಲ್ಲ ಐಎಂಡಿಜಿ (ಅಂತಾರಾಷ್ಟ್ರೀಯ ಕಡಲ ಅಪಾಯಕಾರಿ ಸರಕು) ಹಾಗೂ ಕೆಟಗೆರಿ-4 (ಬೆಂಕಿಯಿಂದ ದಹನಕ್ಕೊಳಗಾಗುವ ಘನವಸ್ತು ಮತ್ತು ದ್ರಾವಣ)ಇದೆ. ಒಂದೊಮ್ಮೆ ಹಡಗು ಅಗ್ನಿಯಿಂದಾಗಿ ಪೂರ್ಣ ಸುಟ್ಟು ಹೋದಲ್ಲಿ ಅಥವಾ ಸಮುದ್ರದಲ್ಲಿ ಮುಳುಗಿದರೆ ಅದರೊಳಗಿನ ವಿಷ ಪದಾರ್ಥಗಳು ಸಮುದ್ರ ತೀರ ಪ್ರದೇಶದ ಮರಳಿನಲ್ಲಿ ಶೇಖರಣೆ ಆಗಬಹುದು. ಹೀಗಾಗಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಇಸಿಜಿಎಸ್ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ.
ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯ ನಡುವೆಯೂ, ಹಡಗಿಗೆ ತಗುಲಿದ್ದ ಬೆಂಕಿಯನ್ನು ಇಂಡಿಯನ್ ಕೋಸ್ಟಲ್ ಗಾರ್ಡ್ ನಂದಿಸಿದೆ. ಹಡಗಿನಿಂದ ಸದ್ಯ ತೈಲ ಅಥವಾ ಕಂಟೇನರ್‌ನಲ್ಲಿರುವ ವಿಷ ದ್ರಾವಣ ಸೋರಿಕೆಯ ಅಪಾಯ ಇಲ್ಲ. ಆದರೂ ಉಡುಪಿ ಜಿಲ್ಲಾಡಳಿತದ ಸೂಚನೆಯಂತೆ ನಾವು ಈ ಭಾಗದಲ್ಲಿ ರಕ್ಷಣಾ ಕಾರ್ಯಕ್ಕೆ ಸನ್ನದ್ಧರಾಗಿದ್ದೇವೆ.-ಮಿಥುನ್ ಎಚ್.ಎನ್., ಕರಾವಳಿ ಕಾವಲು ಪಡೆ ಉಡುಪಿ ವರಿಷ್ಠ