

ವಿಟ್ಲ: ಟೋಯಿಂಗ್ ಲಾರಿಯೊಂದು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದು ಕೊಡಾಜೆ ಜಂಕ್ಷನ್ ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿ ಮಹಡಿಗೆ, ಡಿಕ್ಕಿ ಹೊಡೆದು ಹೋಟೆಲ್ ಗೆ ನುಗ್ಗಿದೆ. ಘಟನೆಯಿಂದ ಚಾಲಕ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಶಿರಸಿ ಮೂಲದ ಲಾರಿ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳದಲ್ಲಿ ಹಗಲು ವೇಳೆ ಹೆಚ್ಚಿನ ಜನ ಸಂದಣಿ ಇರುತ್ತದೆ. ಗುರುವಾರ ರಾತ್ರಿ 1 ಗಂಟೆ ಅಂದಾಜಿಗೆ ಈ ಘಟನೆ ಸಂಭವಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯಿಂದ ಅಂಗಡಿಗಳಿಗೆ ಹಾನಿಯಾಗಿದೆ.