

ಅರಸೀಕೆರೆ: ತಾಲೂಕಿನ ಡಿ.ಎಂ.ಕುರ್ಕೆ ಬೂದಿಹಾಳ್ ವಿರಕ್ತ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಲಿಂಗೈಕ್ಯ ಶ್ರೀ ರಾಜಶೇಖರ ಸ್ವಾಮೀಜಿ ನೂತನ ಗದ್ದುಗೆ ಹಾಗೂ ಗೋಪುರದ ಕಲಶಾರೋಹಣ ಕಾರ್ಯಕ್ರಮ ಅ.26 ಮತ್ತು 27ರಂದು ಆಯೋಜಿಸಲಾಗಿದೆ ಎಂದು ತಾಲೂಕು ವರ್ತಕರ ಸಂಘದ ಅಧ್ಯಕ್ಷರೂ ಆದ ಆಯೋಜಕ ಕೆವಿಎನ್ ಶಿವು ತಿಳಿಸಿದರು.
ಅ.26ರಂದು ಬೆಳಗ್ಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶೀಕೇಂದ್ರ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಿಪಟೂರಿನ ಷಡಕ್ಷರಿ ಮಠದ ಶ್ರೀರುದ್ರಮುನಿ ಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಅ.27ರಂದು ಧರ್ಮ ಜಾಗೃತಿ ಸಮಾರಂಭ ಹಮ್ಮಿಕೊಂಡಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಸೋಮೇಶ್ವರ ಶಿವಾಚಾರ್ಯ ಜಗದ್ಗುರುಗಳು ಆಶೀರ್ವಚನ ನೀಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೆ.ವಿ.ನಿರ್ವಾಣಸ್ವಾಮಿ ಭಾಗವಹಿಸುವರು. ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎ.ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.