

ಬೆಂಗಳೂರು: ಖಾಸಗಿ ಕಂಪನಿ ನೌಕರನಿಗೆ ಗಾಂಜಾ ಕೇಸ್ ದಾಖಲಿಸುವುದಾಗಿ ಬೆದರಿಸಿ 2,500 ರೂ. ಸುಲಿಗೆ ಮಾಡಿದ ಆರೋಪ ಕೇಳಿ ಬಂದ ಬೆನ್ನಲ್ಲೇ ಬಂಡೇಪಾಳ್ಯ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.
ಮಲ್ಲೇಶ್ ಮತ್ತು ಕೀರ್ತಿಕುಮಾರ್ ಅಮಾನತು ಆದವರು. ಜ.11ರ ರಾತ್ರಿ ಖಾಸಗಿ ಕಂಪನಿ ಉದ್ಯೋಗಿ ವೈಭವ್ ಪಾಟೀಲ್, ಮನೆಗೆ ಹೋಗಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಅಷ್ಟೊತ್ತಿಗೆ ಚೀತಾ ವಾಹನದಲ್ಲಿ ಸ್ಥಳಕ್ಕೆ ಬಂದ ಮಲ್ಲೇಶ್ ಮತ್ತು ಕೀರ್ತಿಕುಮಾರ್, ಯುವಕನ ಬ್ಯಾಗ್ ಪರಿಶೀಲನೆ ನಡೆಸಿದಾಗ ಗಾಂಜಾ ಪೊಟ್ಟಣ ಪತ್ತೆಯಾಗಿದೆ. ಈ ಬಗ್ಗೆ ಯುವಕನನ್ನು ಪ್ರಶ್ನಿಸಿದಾಗ ಅದು ಹೇಗೆ ಬಂದಿದೆ ಎಂಬುದು ಗೊತ್ತಿಲ್ಲ ಎಂದು ಉತ್ತರಿಸಿದ್ದಾನೆ. ಕೇಸ್ ದಾಖಲಿಸುವುದಾಗಿ ಬೆದರಿಸಿ ಮತ್ತು ಮೆಡಿಕಲ್ ಮಾಡಿಸುವುದಾಗಿ ಬೆದರಿಸಿ ಆಸ್ಪತ್ರೆ ಬಳಿಗೆ ಕರೆದೊಯ್ದು 2500 ರೂ. ನಗದು ತೆಗೆದುಕೊಂಡಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಒಡ್ಡಿ ಕೊನೆಗೆ ವೈಭವ್ ಪಾಟೀಲ್‌ನನ್ನು ಬಿಟ್ಟು ಹೋಗಿದ್ದರು. ಈ ಬಗ್ಗೆ ವೈಭವ್, ಟ್ವಿಟರ್‌ನಲ್ಲಿ ನಡೆದ ಘಟನೆಯನ್ನು ಬರೆದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿಗೆ ಟ್ಯಾಗ್ ಮಾಡಿದ್ದರು. ಎಲ್ಲೆಡೆ ವೈರಲ್ ಆಗುತ್ತಿದಂತೆ ಎಚ್ಚೆತ್ತ ಪೊಲೀಸ್ ಆಯುಕ್ತರು ತನಿಖೆಗೆ ಸೂಚನೆ ನೀಡಿದ್ದರು.
ವೈಭವ್ ಪಾಟೀಲ್‌ನನ್ನು ಕರೆದು ಕೃತ್ಯ ನಡೆದ ಸ್ಥಳ ಪರಿಶೀಲನೆ ನಡೆಸಿದಾಗ ಬಂಡೇಪಾಳ್ಯ ಠಾಣೆ ವ್ಯಾಪ್ತಿ ಎಂಬುದು ಗೊತ್ತಾಗಿ ಆ ಸಮಯದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ ಯಾರೆಂದು ಪರಿಶೀಲನೆ ನಡೆಸಿದಾಗ ಮಲ್ಲೇಶ್ ಮತ್ತು ಕೀರ್ತಿಕುಮಾರ್ ಎಂಬುದು ಗೊತ್ತಾಯಿತು. ವೈಭವ್ ಪಾಟೀಲ್ ಸಹ ಆರೋಪಿತ ಕಾನ್‌ಸ್ಟೆಬಲ್‌ಗಳ ಮುಖ ಚಹರೆ ಗುರುತು ಹಿಡಿದಿದ್ದಾರೆ. ಇದರ ಮೇರೆಗೆ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ, ರಾತ್ರಿಗಸ್ತು ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮರಾ ನೀಡಲಾಗಿದೆ. ವಾಹನ ಮತ್ತು ಅಪರಿಚಿತರ ಪರಿಶೀಲನೆ ವೇಳೆ ಕಡ್ಡಾಯವಾಗಿ ಕ್ಯಾಮರಾ ಆನ್ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಆದರೆ, ವೈಭವ್ ತಪಾಸಣೆ ವೇಳೆ ಕ್ಯಾಮರಾ ಆನ್ ಮಾಡಿರಲಿಲ್ಲ. ಅಲ್ಲದೆ, ಆತನ ಬ್ಯಾಗ್‌ನಲ್ಲಿ ಕೆಲ ವಸ್ತುಗಳು ಸಿಕ್ಕಿದ್ದವು ಎಂಬ ಕಾರಣಕ್ಕೆ ಕೇಸ್ ದಾಖಲಿಸುವುದಾಗಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕರ್ತವ್ಯದ ವೇಳೆ ಬಾಡಿ ವೋರ್ನ್ ಕ್ಯಾಮರಾ ಧರಿಸದ ಆರೋಪದ ಮೇಲೆ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಸಿ.ಕೆ. ಬಾಬಾ, ಮಾಹಿತಿ ನೀಡಿದರು.