

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಬೆರಳೇಣಿಕೆಷ್ಟು ಪ್ರವಾಸಿ ತಾಣಗಳು ಪ್ರಸಿದ್ಧಿ ಪಡೆದಿದ್ದರೂ ಬಹಳಷ್ಟು ವಿಶೇಷ ಐತಿಹಾಸಿಕ, ನೈಸರ್ಗಿಕ ಮಹತ್ವವುಳ್ಳ ಸ್ಥಳಗಳು ತೆರೆಮರೆಯಲ್ಲಿಯೇ ಇವೆ. ಇವುಗಳಿಗೂ ಕೂಡ ಮನ್ನಣೆ ಸಿಗುವ ಕಾಲ ಸನ್ನಿಹಿತವಾಗಿದ್ದು, ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳಿಗೆ ಶುಕ್ರದೆಸೆ ಆರಂಭವಾಗಲಿದೆ.
ಈ ಮೊದಲು ಶಿವಗಂಗೆ, ಘಾಟಿಸುಬ್ರಹ್ಮಣ್ಯ, ಮಧುರೆ, ಹುಲುಕುಡಿ ಬೆಟ್ಟ ಸೇರಿ ಸುಮಾರು 8 ತಾಣಗಳು ಪ್ರವಾಸಿಗರನ್ನು ಸೆಳೆಯುತ್ತಿದ್ದವು. ರಾಜ್ಯ ಸೇರಿ ನೆರೆ ರಾಜ್ಯದ ಪ್ರವಾಸಿಗರೂ ಗ್ರಾಮಾಂತರ ಜಿಲ್ಲೆಯತ್ತ ಹೆಜ್ಜೆ ಹಾಕುತ್ತಿದ್ದರು. ಇದೀಗ ಇವುಗಳ ಪಟ್ಟಿಗೆ ಇನ್ನೂ 17 ಪ್ರವಾಸಿ ತಾಣಗಳು ಸೇರಿದ್ದು ಮುಂದಿನ ದಿನಗಳಲ್ಲಿ ಗ್ರಾಮಾಂತರ ಜಿಲ್ಲೆ ಪ್ರವಾಸಿಗರ ದಂಡೇ ಹರಿದುಬರಲಿದೆ ಎಂಬ ನಿರೀಕ್ಷೆ ಗರಿಗೆದರಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ವಿಶೇಷ ತಾಣಗಳಿವೆ, ಬೆಟ್ಟಗುಡ್ಡ, ಹಸಿರು ಹೊದಿಕೆಯ ನೈಸರ್ಗಿಕ ಸಂಪತ್ತಿಗೆ ಕೊರತೆಯಿಲ್ಲ ಜತೆಗೆ ಧಾರ್ಮಿಕ ಕ್ಷೇತ್ರವಾಗಿಯೂ ಪ್ರವಾಸಿಗರನ್ನು ಸೆಳೆಯುತ್ತಿದೆ, ಆದರೆ ಇವುಗಳ ಬಗ್ಗೆ ಹೆಚ್ಚಿನ ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರಿಂದ ದೂರವೇ ಉಳಿಯುವಂತಾಗಿದೆ. ಏತನ್ಮಧ್ಯೆ ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಮತ್ತಷ್ಟು ತಾಣಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಕಳುಹಿಸಿದ್ದು ಮುಂದಿನ ದಿನಗಳಲ್ಲಿ ಇವೆಲ್ಲ ತಾಣಗಳು ಮುನ್ನೆಲೆಗೆ ಬರಲಿವೆ ಎಂಬ ಆಶಯ ಕೇಳಿಬರುತ್ತಿದೆ.
ತಾಣಗಳ ಪಟ್ಟಿ ಹೀಗಿದೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ನೋಡುವುದಾದರೆ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ದೇವನಹಳ್ಳಿ ಕೋಟೆ, ಕುಂದಾಣ ಬೆಟ್ಟ, ಶ್ರೀಕೋಟೆ ವೇಣುಗೋಪಾಲಸ್ವಾಮಿ ದೇವಸ್ಥಾನ, ಆವತಿ ಬೆಟ್ಟ, ತಿಮ್ಮರಾಯಸ್ವಾಮಿ ದೇವಸ್ಥಾನ, ಆವತಿ ಕೆರೆ, ಶಿರಡಿ ಸಾಯಿ ಬಾಬಾ ದೇವಾಲಯ, ವೃಕ್ಷೋದ್ಯಾನ ಟ್ರೀ ಪಾರ್ಕ್, ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣ ಪ್ರಮುಖ ತಾಣವಾಗಿ ಗಮನ ಸೆಳೆಯುತ್ತಿವೆ. ಅದೇ ರೀತಿ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ಚಿಕ್ಕ ಮಧುರೆ, ಮಾಕಳಿ ದುರ್ಗ ಬೆಟ್ಟ, ಹುಲ್ಲುಕುಡಿ ಬೆಟ್ಟ. ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಶಿವಗಂಗೆ ಬೆಟ್ಟ, ನಿಜಗಲ್ ಸಿದ್ದರಬೆಟ್ಟ, ಉದ್ದಾನ ವೀರಭದ್ರ ಸ್ವಾಮಿ ದೇವಸ್ಥಾನ, ಮಹಿಮಾ ರಂಗನಾಥ ಸ್ವಾಮಿ ದೇವಸ್ಥಾನ, ವೀರಭದ್ರ ಸ್ವಾಮಿ ದೇವಸ್ಥಾನ-ದೇವರ ಹೊಸಹಳ್ಳಿ, ಮಣ್ಣೇ(ಮಾನ್ಯಪುರ), ಶ್ರೀ ರಾಮಲಿಂಗೇಶ್ವರ ದೇವಸ್ಥಾನ-ಬರದಿ ಬೆಟ್ಟ. ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಹೊಸಕೋಟೆ ಕೆರೆ(ದೊಡ್ಡ ಅಮಾನಿಕೆರೆ), ಧರ್ಮೇಶ್ವರ ದೇವಸ್ಥಾನ-ಕೊಂಡ್ರಹಳ್ಳಿ, ಕಾಲಭೈರವೇಶ್ವರ ದೇವಸ್ಥಾನ ಜಡಿಗೇನಹಳ್ಳಿ. ಕಾಲಕುಂಟೆ ರಂಗನಾಥ ಸ್ವಾಮಿ ದೇವಸ್ಥಾನ. ಜಡಿಗೆನಹಳ್ಳಿ ಸಪ್ತಮಾತೆಯ ದೇವಸ್ಥಾನ-ಈ ಸ್ಥಳಗಳನ್ನು ಜಿಲ್ಲೆಯ ಪ್ರಮುಖ 25 ಪ್ರವಾಸಿ ತಾಣಗಳಾಗಿ ಗುರುತಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
--
ಒಂದು ದಿನ ಜಿಲ್ಲಾ ಪ್ರವಾಸ: ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳತ್ತ ಬರಲು ರಾಜಧಾನಿ ಜನರು ಹೆಚ್ಚು ಆಸಕ್ತಿ ತೋರಿಸುತ್ತಾರೆ, ಇಲ್ಲಿ ಬಹುತೇಕ ಕೆರೆಗಳಿದ್ದು ಇವುಗಳ ಅಭಿವೃದ್ಧಿಯಾದರೆ ಸಾಹಸ ಕ್ರೀಡೆ ಆಸಕ್ತರಿಗೆ ಇಷ್ಟವಾಗಲಿದೆ, ಹಾಗೇ ಶಿವಗಂಗೆಯಂತೆ ಅನೇಕ ಬೆಟ್ಟಗುಡ್ಡಗಳಿದ್ದು, ಚಾರಣಪ್ರಿಯರಿಗೆ ಆಪ್ತವಾಗಲಿದೆ. ಈಗಾಗಲೇ ಕೆಎಸ್‌ಟಿಡಿಸಿ ವತಿಯಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಒಂದು ದಿನದ ಪ್ರವಾಸ ಆಯೋಜನೆಗೆ ಚಾಲನೆ ನೀಡಿದ್ದು, ಗ್ರಾಮಾಂತರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಬಯಸುವ ಪ್ರವಾಸಿಗರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಆವತಿ, ಗುಂಡಮಗೆರೆಗೆ ಡಿಪಿಆರ್: ದೇವನಹಳ್ಳಿಯ ಆವತಿ ಬೆಟ್ಟ ಹಾಗೂ ದೊಡ್ಡಬಳ್ಳಾಪುರದ ಗುಂಡಮಗೆರೆ ಕೆರೆ ಅಭಿವೃದ್ಧಿ ಬಗ್ಗೆ ಈಗಾಗಲೇ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಡಿಪಿಆರ್ ಸಿದ್ದಪಡಿಸಿದೆ. ದೇವನಹಳ್ಳಿಯ ಕುಂದಾಣ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ 25 ಪ್ರವಾಸಿ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ನೀತಿ 2024-25 ರಡಿ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ, ಪ್ರವಾಸಿಗರನ್ನು ಸ್ವಾಗತಿಸಲಿವೆ.
ಪ್ರೀತಿ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ