ಕೊಡಗಿಗೆ ಮಳೆಗಾಲದ ಪ್ರವಾಸಿಗರ ಭೇಟಿ ಕ್ಷೀಣ

Tourists visit Kodagi during rainy season
Published on

ಮಡಿಕೇರಿ:

ಕೊಡಗಿನ ಮಳೆಗಾಲದ ಪ್ರವಾಸೋದ್ಯಮದ ಮೇಲೆ ವಯನಾಡು ದುರಂತದ ಕರಿನೆರಳು ಬಿದ್ದಂತಿದೆ. ಜುಲೈ, ಆಗಸ್ಟ್ ತಿಂಗಳ ರಜಾ ದಿನಗಳು, ವಾರಾಂತ್ಯಗಳಲ್ಲಿ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕಂಡು ಬರುತ್ತಿದ್ದರು. ಆದರೆ ಈ ವರ್ಷ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಕೂಡ ಪ್ರವಾಸಿಗರು ಈ ವರ್ಷ ಇಲ್ಲಿಗೆ ಬಂದಿಲ್ಲ.

ಮಳೆಗಾಲದಲ್ಲಿ ಕೊಡಗನ್ನು ಕಣ್ತುಂಬಿಸಿಕೊಳ್ಳುವ ಅನುಭವವೇ ವಿಭಿನ್ನ. ಕಾಲು ಕೂಡ ಕಾಣದಂತೆ ಕವಿಯುವ ಮಂಜು, ಬಿಸಿ ಬಿಸಿ ಕಾಫಿ ಕುಡಿಯುತ್ತಾ ಮೈಯೊಳಗೆ ಬಿಸಿಯೇರಿದರೂ ದೇಹವನ್ನು ತಟ್ಟುವ ಚಳಿ, ಬಿಡುವು ಕೊಡದೇ ಜಿಟಿ ಜಿಟಿ ಸುರಿಯುತ್ತಲೇ ಇರುವ ಮಳೆ, ಅಲ್ಲಲ್ಲಿ ಜುಳು ಜುಳು ಬೀಳುವ ಝರಿಗಳು, ತುಂಬಿ ಧುಮ್ಮಿಕ್ಕುವ ಜಲಪಾತಗಳು…ಇಂಥ ಅನುಭವ ಸವಿಯುವುದಕ್ಕಾಗಿಯೇ ಮಳೆಗಾಲದಲ್ಲಿ ಕೊಡಗಿನ ಕಡೆಗೆ ಪ್ರವಾಸ ಯೋಜಿಸಿಸುವವರು ಇದ್ದಾರೆ. ಇಂಥವರಿಗಾಗಿಯೇ ಜಿಲ್ಲೆಯಲ್ಲಿ ಮಳೆಗಾಲದ ಪ್ರವಾಸೋದ್ಯಮ ಹುಟ್ಟಿಕೊಂಡಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಕೊಡಗು ಪ್ರಾಕೃತಿಕ ಸಂಪತ್ತಿನಿAದ ಶ್ರೀಮಂತವಾಗಿದೆ. ಇಲ್ಲಿಯ ಪ್ರಕೃತಿ ಸೌಂದರ್ಯ ಸವಿಯಲು ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಪ್ರವಾಸಿ ಸೀಸನ್‌ನಲ್ಲಿ ಮಾತ್ರವಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಬಲ್ಲ ಸಂಗತಿಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ವಿಶೇಷ. 2015ರಿಂದ ಈಚೆಗೆ ಹೆಚ್ಚು ಪ್ರಚಲಿತಕ್ಕೆ ಬಂದಿರುವ ಮಳೆಗಾಲದ ಪ್ರವಾಸೋದ್ಯಮಕ್ಕೆ 2018, 2019 ಹಾಗೂ 2020ರ ಪ್ರಾಕೃತಿಕ ವಿಕೋಪ ಮತ್ತು ಈ ಬೆನ್ನಲ್ಲೆ ಕಾಣಿಸಿಕೊಂಡ ಕೊರೊನಾ ದೊಡ್ಡ ಮಟ್ಟಿಗೆ ಹೊಡೆತ ಕೊಟ್ಟಿತ್ತು.

ಆದರೆ ಮಳೆಗಾಲದ ಪ್ರವಾಸೋದ್ಯಮ 2022ರಿಂದ ಮತ್ತೆ ನಿಧಾನಕ್ಕೆ ಜೀವ ಪಡೆದುಕೊಂಡಿತ್ತು. ಜೂನ್ ಕೊನೆಯ ವಾರ ಮತ್ತು ಜುಲೈ ಮೊದಲ ವಾರದಿಂದ ಶುರುವಾಗುವ 'ಮಳೆಗಾಲ ಟೂರಿಸಂ ಟ್ರೆಂಡ್' ಅಕ್ಟೋಬರ್ ತನಕವೂ ಮುಂದುವರಿಯುತ್ತದೆ. ಅಷ್ಟರಲ್ಲಾಗಲೇ ದಸರಾವೂ ಬರುವುದರಿಂದ ಪ್ರವಾಸೋದ್ಯಮ ಚಟುವಟಿಕೆಯಿಂದ ಇರಲು ಮಳೆಗಾಲದ ಪ್ರವಾಸೋದ್ಯಮ ಸ್ಫೂರ್ತಿ ನೀಡುತ್ತಾ ಬಂದಿದೆ. ಆದರೆ ಈ ವರ್ಷ ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ. ಇನ್ನೇನು ಮಳೆಗಾಲದ ಪ್ರವಾಸೋದ್ಯಮ ಚಿಗುರಿಕೊಳ್ಳುತ್ತಿದೆ ಎನ್ನುವಾಗಲೇ ಪಕ್ಕದ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲೂ ಹೆಚ್ಚಿನ ಮಳೆ ಸೇರಿದಂತೆ ಅಲ್ಲಲ್ಲಿ ವರದಿಯಾಗುತ್ತಿದ್ದ ಚಿಕ್ಕಪುಟ್ಟ ಭೂಕುಸಿತ ಪ್ರಕರಣಗಳೂ ಪ್ರವಾಸಿಗರನ್ನು ಕೊಡಗಿನತ್ತ ಬಾರದಂತೆ ತಡೆ ಹಿಡಿದಿದೆ.

2018ರಲ್ಲೂ ಮೊದಲು ವಯನಾಡಿನಲ್ಲೇ ಭೂಕುಸಿತ ಸಂಭವಿಸಿತ್ತು. ನಂತರ ಆಗಸ್ಟ್ 14ರಿಂದ ಈಚೆಗೆ ಕೊಡಗಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಜರಿದು ಅನಾಹುತಗಳಿಗೆ ಕಾರಣವಾಯಿತು. 19 ಜನರು ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡರು. ದೊಡ್ಡ ಸಂಖ್ಯೆಯಲ್ಲಿ ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ತೋಟ, ಸಾಕು ಪ್ರಾಣಿಗಳನ್ನೂ ಕಳೆದುಕೊಂಡರು. ಈ ದುರಂತದಲ್ಲಿ ಸಂತ್ರಸ್ತರಾದವರ ಪೈಕಿ ಕೆಲವರಿಗೆ ಇನ್ನು ಕೂಡ ಸರಿಯಾದ ರೀತಿಯಲ್ಲಿ ಪುನರ್ವಸತಿ ವ್ಯವಸ್ಥೆ ಆಗಲಿಲ್ಲ. ಇದು ಕರ್ನಾಟಕದ ಮೊದಲ ಅತ್ಯಂತ ದೊಡ್ಡ ಭೂಕುಸಿತ ದುರಂತವಾಗಿದ್ದು, ಆ ಭಯ ಈಗಲೂ ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರನ್ನೂ ಕಾಡುತ್ತಿದೆ.

'ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರು ಕೊಡಗಿನಲ್ಲಿ 104 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿದ್ದಾರೆ. ಇದರ ಆಧಾರದಲ್ಲಿ ಸುಮಾರು 3 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲು ಕ್ರಮ ತೆಗೆದುಕೊಂಡಿದ್ದು, 313 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಒದಗಿಸಲು 10 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂತ್ರಸ್ತರಿಗೆ ಆಶ್ರಯ ಕೊಡುವುದಕ್ಕೋಸ್ಕರ ಇನ್ನೂ 95 ಕಾಳಜಿ ಕೇಂದ್ರ ತೆರೆಯಲಾಗುತ್ತಿದೆ….'ಈ ರೀತಿಯ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಕೂಡ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರ ಜತೆಗೆ ಆಗಸ್ಟ್ನಲ್ಲಿ ಮಳೆ ಹೆಚ್ಚಾಗಲಿದೆ ಎನ್ನುವ ಹವಾಮಾನ ಇಲಾಖೆ ಮುನ್ಸೂಚನೆಯೂ ಇಲ್ಲಿ ಪರಿಣಾಮ ಬೀರಿದೆ.

ಸಾಮಾನ್ಯವಾಗಿ ರಜಾ ದಿನಗಳು, ವಾರಾಂತ್ಯದ ದಿಗಳಲ್ಲಿ ಕೊಡಗಿನಲ್ಲಿ ಪ್ರವಾಸಿಗರು ತುಂಬಿರುತ್ತಾರೆ. ಆದರೆ ಈಗ ಪ್ರವಾಸಿ ತಾಣಗಳು ಖಾಲಿ ಹೊಡೆಯುತ್ತಿವೆ. ನಿರೀಕ್ಷಿಸಿದಷ್ಟು ಪ್ರವಾಸಿಗರು ಎಲ್ಲಿಯೂ ಕಂಡುಬರುತ್ತಿಲ್ಲ. ರಜಾ ದಿನವಾಗಿದ್ದ ಆ.15, ಆ.16ರಂದು ಕೂಡ (ಗುರುವಾರ, ಶುಕ್ರವಾರ) ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇದೇ ಪರಿಸ್ಥಿತಿ ಕಂಡು ಬಂತು. ಮಡಿಕೇರಿಯ ಅಬ್ಬಿಫಾಲ್ಸ್, ರಾಜಾಸೀಟ್, ಮಾಂದಲ ಪಟ್ಟಿ ಸೇರಿದಂತೆ ಕೊಡಗಿನ 23ಕ್ಕೂ ಹೆಚ್ಚು ಪ್ರವಾಸಿತಾಣಗಳಲ್ಲಿ ಸಾಮಾನ್ಯ ದಿನಗಳಲ್ಲಿ ಇರುವಷ್ಟು ಕೂಡ ಪ್ರವಾಸಿಗರು ಇಲ್ಲ.

ಈ ವರ್ಷದ ಜನವರಿಯಿಂದ ಇಲ್ಲಿಯ ತನಕ ಸುಮಾರು 13-14 ಲಕ್ಷ ಪ್ರವಾಸಿಗರು ಕೊಡಗಿಗೆ ಬಂದಿದ್ದಾರೆ. ಕಳೆದ ವರ್ಷ ಇದರ ಎರಡರಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಆ.15ರ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಒಂದಿಷ್ಟು ಹೆಚ್ಚಳ ಆಗಬಹುದು ಎನ್ನುವ ನಿರೀಕ್ಷೆ ಇತ್ತಾದರೂ ಅದು ಸಹ ಹುಸಿಯಾಗಿದೆ. ಜಿಲ್ಲೆಯ ಬಹುತೇಕ ಹೋಮ್ ಸ್ಟೇ, ರೆಸಾರ್ಟ್ಗಳಲ್ಲಿ ತಿಂಗಳ ಹಿಂದೆ ಆಗಿದ್ದ ಬುಕ್ಕಿಂಗ್‌ಗಳೆಲ್ಲಾ ವಯನಾಡ್ ದುರಂತ ಸಂಭವಿಸುತ್ತಿದ್ದAತೆಯೇ ರದ್ದಾಗಿದೆ. ಕೆಲವು ಐಷಾರಾಮಿ ರೆಸಾರ್ಟ್ಗಳು ಮಾತ್ರ ತಮ್ಮ ಎಂದಿನ ಬುಕ್ಕಿಂಗ್ ಕಾಯ್ದುಕೊಂಡಿವೆ ಎನ್ನಲಾಗುತ್ತಿದೆ.

ಮಳೆಗಾಲದ ಅವಧಿಯಲ್ಲಿ ಪ್ರವಾಸೋದ್ಯಮಕ್ಕೆ ಕೊಡಗಿನಲ್ಲಿ ರಜೆ ಘೊಷಣೆ ಮಾಡಬೇಕು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. 2-3 ತಿಂಗಳು ಪ್ರವಾಸೋದ್ಯಮ ಬಂದ್ ಆಗುವುದರಿಂದ ಇಲ್ಲಿಯ ಪ್ರಕೃತಿ ಮೇಲೆ ಅಷ್ಟರ ಮಟ್ಟಿಗೆ ಒತ್ತಡ ಕಡಿಮೆ ಆಗುತ್ತದೆ. ಒಂದು ವೇಳೆ ಪ್ರಾಕೃತಿಕ ದುರಂತಗಳು ಸಂಭವಿಸಿದರೆ ಹೆಚ್ಚಿನ ಅಪಾಯಗಳು ಆಗುವುದು ತಪ್ಪುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮಳೆ ಬಂತೆAದರೆ ಗುಡ್ಡ ಕುಸಿತ, ರಸ್ತೆ ಮೇಲೆ ಮಣ್ಣು ಕುಸಿತ, ಮರ ಬೀಳುವುದು, ವಿದ್ಯುತ್ ತಂತಿಗಳು ತುಂಡಾಗುವುದು, ರಸ್ತೆ ಮೇಲೆ ನೀರು ಬಂದು ವಾಹನ ಸಂಚಾರಕ್ಕೆ ಸಮಸ್ಯೆ ಆಗುವುದು… ಇಂತ ಸಮಸ್ಯೆಗಳೆಲ್ಲಾ ಕೊಡಗಿನಲ್ಲಿ ಸಾಮಾನ್ಯ. ಸ್ಥಳೀಯರು ಕೂಡ ಇದಕ್ಕೆ ಹೊಂದಿಕೊAಡಿರುತ್ತಾತೆ. ಆದರೆ ಇಂಥ ಸಂದರ್ಭದಲ್ಲಿ ಪ್ರವಾಸಿಗರು ಇದ್ದರೆ ಎಲ್ಲರಿಗೂ ತೊಂದರೆ ಎನ್ನುವ ಕಾರಣವನ್ನೂ ಕೊಡಲಾಗುತ್ತಿದೆ.

ಪ್ರವಾಸಿಗರು ಕೊಡಗಿಗೆ ಕೇವಲ ಇಲ್ಲಿಯ ಪ್ರಾಕೃತಿ ಸೌಂದರ್ಯ ಕಣ್ತುಂಬಿಸಿಕೊಳ್ಳುವುದಕ್ಕೆ ಮಾತ್ರ ಬರುವುದಿಲ್ಲ. ವಿಭಿನ್ನವಾಗಿರುವ ಕೊಡಗಿನ ಸಂಪ್ರದಾಯ, ಹಬ್ಬ, ಆಹಾರ, ಉಡುಪುಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದಲೂ ಭೇಟಿ ಕೊಡುವವರು ಇದ್ದಾರೆ. ಮಳೆಗಾಲದಲ್ಲಿ ಕೊಡಗಿನಲ್ಲಿ ಮಳೆ ಮಾತ್ರವಲ್ಲದೆ ವಾತಾವವರಣ ಶೀತದಿಂದ ಕೂಡಿರುತ್ತದೆ. ಹಾಗಾಗಿ ದೇಹವನ್ನು ಬಿಸಿಯಾಗಿಟ್ಟುಕೊಳ್ಳಲು ಮಳೆಗಾಲದಲ್ಲಿ ಮಾತ್ರ ಸಿಗುವ ಉಷ್ಣ ಆಹಾರಗಳನ್ನು ಬಳಸುತ್ತಾರೆ. ಮಳೆ ಸಂದರ್ಭ ಜಿಲ್ಲೆಗೆ ಬಂದರೆ ಇಲ್ಲಿಯ ಬಹುತೇಕ ರೆಸಾರ್ಟ್, ಹೋಮ್‌ಸ್ಟೇಗಳಲ್ಲಿ ಮಳೆಗಾಲದ ವಿಶೇಷ ತಿನಿಸುಗಳ ರುಚಿಯನ್ನು ಸವಿಯಬಹುದು. ಎಳೆ ಬಿದಿರಿನ ಕಣಿಲೆ ಪದಾರ್ಥಗಳು, ಅಣಬೆ, ಏಡಿ, ಮರ ಕೆಸುವಿನ ಪತ್ರೊಡೆ, ವೈವಿಧ್ಯಮಯ ಪಂದಿಕರಿಗಳು, ಅಕ್ಕಿರೊಟ್ಟಿ, ಹಲಸಿನ ಬೀಜದ ಚಟ್ನಿ, ಹಲಸಿನ ಹಣ್ಣಿನ ಕಡುಬು.. ಹೀಗೆ ಮಾಂಸಹಾರಿ ಮತ್ತು ಸಸ್ಯಹಾರಿ ತಿನಿಸುಗಳು ಸಿಗುತ್ತದೆ. ಬಗೆ ಬಗೆಯ ವೈನ್‌ಗಳೂ ಲಭ್ಯವಿರುತ್ತದೆ. ಇದನ್ನೆಲ್ಲಾ ಅತಿಥಿಗಳಿಗೆ ಉಣಬಡಿಸಲು ಹೋಮ್‌ಸ್ಟೇಗಳಲ್ಲಿ ಸಿದ್ಧತೆ ನಡೆದಿತ್ತು. ಆದರೆ ಪ್ರವಾಸಿಗರೇ ಬರುತ್ತಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ ಇದೆ. ಸುಮಾರು 2 ಲಕ್ಷದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ವರ್ಷ ಕಡಿಮೆ ಪ್ರಮಾಣದಲ್ಲಿ ಕೊಡಗಿಗೆ ಬಂದಿದ್ದಾರೆ. ವಯನಾಡು ದುರಂತದ ನಂತರವAತೂ ಈ ಸಂಖ್ಯೆ ಮತ್ತಷ್ಟು ಕಡಿಮೆ ಆಗಿದೆ. ಜನವರಿಯಿಂದ ಇಲ್ಲಿಯ ತನಕ 13-14 ಲಕ್ಷ ಪ್ರವಾಸಿಗರು ಮಾತ್ರ ಕೊಡಗಿಗೆ ಭೇಟಿ ಕೊಟ್ಟಿದ್ದಾರೆ.
ಅನಿತಾ ಭಾಸ್ಕರ್, ಉಪ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net