

ಮಡಿಕೇರಿ: ಪ್ರವಾಸಿ ತಾಣದಲ್ಲಿ ಪ್ರವಾಸಿಗರು/ ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತ?್ಟು ಹೆಚ್ಚಾಗಿದ್ದು, ಇವುಗಳನ್ನು ವಿಕ್ಷೀಸಲು ಬರುವಂತಹ ಸಾರ್ವಜನಿಕರು/ ಪ್ರವಾಸಿಗರು ಸೌಂದರ್ಯಕ್ಕೆ ಮನಸೋತು ಬಹಳ ಹತ್ತಿರದಿಂದ ಪೋಟೋ ಅಥವಾ ವಿಡಿಯೋ ತೆಗೆಯುವ, ರೀಲ್ಸ್ ಮಾಡುವ ಅನಗತ್ಯ ಸಾಹಸ ಮಾಡದಿರುವಂತೆ ಮನವಿ ಮಾಡಿದ್ದಾರೆ.
ಮಳೆಗೆ ಕಲ್ಲು ಬಂಡೆಗಳು, ಒದ್ದೆಯಾಗಿ ಜಾರುತ್ತಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಹೊಸ ಪ್ರದೇಶದಲ್ಲಿ ಅಲ್ಲಿನ ಪರಿಸರದ ಬಗ್ಗೆ ಅರಿವಿರುವುದಿಲ್ಲ. ಆದ್ದರಿಂದ ಸ್ಥಳೀಯರ ಮಾತುಗಳನ್ನು ಗೌರವಿಸಿ, ಪ್ರವಾಸಿ ತಾಣಗಳಲ್ಲಿ ಅನುಸರಿಸಬೇಕಾದ ಕನಿ?್ಠ ನಿಯಮಗಳ ಅನುಸರಿಸಿ ಎಂದ ಅವರು, ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ, ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನೂ ಸಹ ನಿಯೋಜಿಸಲಾಗಿದೆ. ಆದರೂ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನೀಡಿರುವ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ತಮ್ಮ ಅಮೂಲ್ಯ ಜೀವವನ್ನು ಹಾನಿ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಹೋಟೆಲ್, ಹೋಂ-ಸ್ಟೇ, ರೆಸಾರ್ಟ್‌ಗಳಲ್ಲಿ ತಂಗುವ ಸಾರ್ವಜನಿಕರಿಗೆ/ ಪ್ರವಾಸಿಗರಿಗೆ ಮಾಲೀಕರು ಅಥವಾ ಸಿಬ್ಬಂದಿಗಳು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಜಾಗೃತಿ ಹಾಗೂ ಸುರಕ್ಷತೆಯಿಂದ ಇರುವ ಬಗ್ಗೆ ಅರಿವು ಮೂಡಿಸಬೇಕು. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರವಾಸಿಗರು ಸರ್ಕಾರದಿಂದ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದಲ್ಲಿ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದಿದ್ದಲ್ಲಿ ಪ್ರವಾಸಿಗರ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಎಚ್ಚರಿಸಿದ್ದಾರೆ.