

ಹಳೇಬೀಡು: ರಾಷ್ಟ್ರೀಯತೆಯ ಮಹತ್ವವನ್ನು ಮನೆಮನೆಗೆ ತಿಳಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಹಳೇಬೀಡಿನ ಹೊಯ್ಸಳೇಶ್ವರ ದೇಗುಲಕ್ಕೆ ಆಗಮಿಸುವ ಪ್ರವಾಸಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.
ಪಾರಂಪರಿಕ ತಾಣದಲ್ಲಿ ಇಂತಹ ಮನಮುಟ್ಟುವ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಪುರಾತತ್ವ ವಿಭಾಗದ ಉಪಕ್ರಮಕ್ಕೆ ಪ್ರವಾಸಿಗರು, ಇತಿಹಾಸ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರು ಭೇಟಿ ನೀಡುವ ಐತಿಹಾಸಿಕ ಸ್ಥಳದಲ್ಲಿ ರಾಷ್ಟ್ರ ಪ್ರೇಮವನ್ನು ಸಾರುವ ಅಭಿಯಾನವನ್ನು ನಡೆಸಿದರೆ ಅರ್ಥಪೂರ್ಣವಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬುಧವಾರ ಹೊಯ್ಸಳೇಶ್ವರ ದೇಗುಲಕ್ಕೆ ಭೇಟಿ ನೀಡಿದ ಬಹಳಷ್ಟು ಪ್ರವಾಸಿಗರು ಬೆಳಗ್ಗೆಯಿಂದ ಸಂಜೆಯವರೆಗೂ ಪೋಡಿಯಂನಲ್ಲಿ ನಿಂತು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಸೆಲ್ಫಿ ವಿತ್ ತಿರಂಗಾ ಘೋಷಣೆಯೊಂದಿಗೆ ಅನೇಕ ಯುವಕ ಯುವತಿಯರು ದೇಗುಲದ ಎದುರಿಗೆ ಭಾವಚಿತ್ರ ಕ್ಲಿಕ್ಕಿಸಿಕೊಂಡು ಸಂತೋಷಪಟ್ಟರು. ದೇಶ-ವಿದೇಶದಿಂದ ಆಗಮಿಸಿದ್ದ ಪ್ರವಾಸಿಗರಿಗೆ ಹರ್ ಘರ್ ತಿರಂಗಾ ಘೋಷಣೆಯಿರುವ ಆಕರ್ಷಕ ವಿನ್ಯಾಸವನ್ನು ನೋಡಿ ಅಚ್ಚರಿಪಟ್ಟು ಸ್ವಯಂಪ್ರೇರಿತರಾಗಿ ಫೋಟೊಗೆ ಫೋಸ್ ಕೊಟ್ಟರು. ಸ್ವಾತಂತ್ರೃ ಲಭಿಸಿದ ಸಂಭ್ರಮವನ್ನು ನಮ್ಮ ಪರಂಪರೆಯೊಂದಿಗೆ ಆಚರಿಸುವ ಕ್ರಮ ಉತ್ತಮವಾದುದು ಎಂದು ಅಭಿಪ್ರಾಯಪಟ್ಟರು.
ದೇಶವು ಸ್ವತಂತ್ರಗೊಂಡಿದ್ದೇ ಪರಂಪರೆಯ ಅನುಸರಣೆಯಿಂದ. ಅಹಿಂಸೆ, ತ್ಯಾಗ, ಪ್ರೀತಿ ಮತ್ತು ಪ್ರಾಚೀನ ಸಂಸ್ಕೃತಿಯ ರಕ್ಷಣೆಯ ಭಾವವೇ ಹೋರಾಟಕ್ಕೆ ಪ್ರೇರಣೆ ನೀಡಿದ್ದು. ಇಂದು ಅಂತಹ ಪಾರಂಪರಿಕ ತಾಣದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಸ್ವಾತಂತ್ರೃದ ಸಂಭ್ರಮ ಆಚರಿಸುತ್ತಿರುವುದು ಹೆಮ್ಮೆ. ರಾಕೇಶ್ ಅನಂತಪುರಂ, ತೆಲಂಗಾಣ ಪ್ರವಾಸಿಗ