

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದರೂ ಅರಮನೆ, ಮೃಗಾಲಯ ಸೇರಿದಂತೆ ನಗರದ ಪ್ರವಾಸಿ ತಾಣಗಳಲ್ಲಿ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಕಂಡುಬಂದರು.
ದಸರಾ ಹಬ್ಬ ಹಾಗೂ ಸತತ ರಜೆ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸಿದ್ದರು. ಇದರಿಂದ ಮೃಗಾಲಯ, ಅರಮನೆ ಸೇರಿದಂತೆ ಪ್ರವಾಸಿ ತಾಣಗಳ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದರು. ಮೃಗಾಲಯದಲ್ಲಿ ಹೆಚ್ಚಿನ ಪ್ರವಾಸಿಗರು ಕಂಡುಬಂದರು. ಕುಟುಂಬದೊಂದಿಗೆ ಮೃಗಾಲಯಕ್ಕೆ ಬಂದು ನೆಚ್ಚಿನ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿದರು.
ಅರಮನೆಗೆ ಆಗಮಿಸಿದ ಸಾವಿರಾರು ಪ್ರವಾಸಿಗರು ಇಡೀ ಆವರಣದಲ್ಲಿ ಸುತ್ತಾಡಿ ಸಂಭ್ರಮಿಸಿದರು. ಅರಮನೆ ಆವರಣದ ಮೂಲೆ ಮೂಲೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.
ದೀಪಾಲಂಕಾರ ಕಣ್ತುಂಬಿಕೊಂಡರು:
ದಸರಾ ಮುಗಿದರೂ ವಿದ್ಯುತ್ ದೀಪಾಲಂಕಾರ ದಿನಾಂಕವನ್ನು ವಿಸ್ತರಣೆ ಮಾಡಿದ್ದರಿಂದ ನಗರ ಕಣ್ಮನ ಸೆಳೆಯುತ್ತಿದ್ದು, ಭಾನುವಾರ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಗರದ ಕಡೆ ಮುಖ ಮಾಡಿದ್ದರು.
ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ದೀಪಗಳು ಮನಸ್ಸಿಗೆ ಮುದ ನೀಡುತ್ತಿವೆ. ನಗರದ ಪ್ರಮುಖ ರಸ್ತೆ, ವೃತ್ತಗಳು ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡು ವೈಭವ ನೆನಪಿಸುತ್ತಿವೆ. ದೀಪಾಲಂಕಾರವನ್ನು ಆಕರ್ಷಣೀಯವಾಗಿಸಲು ಸರ್ಕಾರ ಹತ್ತಾರು ಕಿ.ಮೀ.ನಲ್ಲಿ ರಸ್ತೆ, ವೃತ್ತಗಳಿಗೆಸ ವಿದ್ಯುತ್ ದೀಪಾಲಂಕಾರ ಮಾಡಿದೆ.
ಹಾಗಾಗಿ, ಭಾನುವಾರ ಸಂಜೆಯಾಗುತ್ತಿದ್ದಂತೆ ದೀಪಾಲಂಕಾರ ವೀಕ್ಷಿಸಲು ಹೆಚ್ಚು ಸಾರ್ವಜನಿಕರು ಆಗಮಿಸಿದ್ದರು. ತಿಳಿ ಬೆಳಕಿನೊಂದಿಗೆ ವಿವಿಧ ಬಣ್ಣಗಳಲ್ಲಿ ಕಂಗೊಳಿಸುವ ದೀಪಾಲಂಕಾರ ವೀಕ್ಷಿಸಲು ಸಾರ್ವಜನಿಕರು ರಸ್ತೆಗಿಳಿದಿದ್ದರಿಂದ ಕೆಲವೆಡೆ ಮಾತ್ರ ವಾಹನಗಳ ಸಂಚಾರ ದ್ವಿಗುಣವಾಗಿ, ರಸ್ತೆಗಳಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ನಗರದ ಹೃದಯಭಾಗವಾದ ಸಯ್ಯಜಿರಾವ್ ರಸ್ತೆ, ಬಿಎನ್ ರಸ್ತೆ, ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಹಾರ್ಡಿಂಜ್ ವೃತ್ತ, ಅರಮನೆ ಸುತ್ತಮುತ್ತಲಿನ ರಸ್ತೆಗಳು, ನೂರಡಿ ರಸ್ತೆಯಲ್ಲಿ ಲೈಟಿಂಗ್ಸ್ ನೋಡಲು ಜನ ಜಮಾಯಿಸಿದ್ದರು. ಹಾಗಾಗಿ ಎಲ್ಲ ರಸ್ತೆಗಳಲ್ಲಿ ವಾಹನ ತುಂಬಿ ಹೋಗುತ್ತಿತ್ತು. ವಿವಿಧ ಬಣ್ಣಗಳಲ್ಲಿ ಕಂಗೊಳಿಸುವ ದೀಪಾಲಂಕಾರವನ್ನು ಕಣ್ತುಂಬಿಕೊಂಡರು. ದೀಪಾಲಂಕಾರದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.