ಗುಳೇದಗುಡ್ಡದ ಜಲಪಾತದಲ್ಲಿ ಪ್ರವಾಸಿಗರ ಸಂಭ್ರಮ

Tourists celebrate at Guledagudda waterfall
ಗುಳೇದಗುಡ್ಡ ಸಮೀಪದ ಕೋಟೆಕಲ್ಲ ಹಿರೇದಿಡುಗು ಜಲಪಾತದಲ್ಲಿ ಸಂಭ್ರಮಿಸುತ್ತಿರುವ ಜನರು.
Published on

ಗುಳೇದಗುಡ್ಡ: ಪಟ್ಟಣ ಸೇರಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗುಳೇದಗುಡ್ಡ-ಕೋಟೆಕಲ್ಲ-ಹಿರೇದಿಡುಗು ಜಲಪಾತಕ್ಕೀಗ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಎರಡು ದಿನಗಳಿಂದ ಈ ಹಿರೆದಿಡುಗು ಜಲಪಾತ ಮೈದುಂಬಿ ಹರಿಯುತ್ತಿದೆ. ಹಲವಾರು ಜನರು, ಯುವಕರು ಇಲ್ಲಿಗೆ ಭೇಟಿ ನೀಡಿ, ಧುಮ್ಮಿಕ್ಕಿ ಹರಿಯುವ ನೀರಿಗೆ ಮೈಯೊಡ್ಡಿ ಸಂಭ್ರಮಿಸುತ್ತಿದ್ದಾರೆ.

ಅಲ್ಲದೆ, ಜಲಪಾತ ಕೆಳಗೆ ಸ್ನಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ಮಳೆಗಾಲಯದಲ್ಲಿ ತನ್ನ ಸೌಂದರ್ಯ ಪ್ರದರ್ಶಿಸುವ ಈ ಜಲಪಾತ ಈ ಭಾಗದ ಪ್ರವಾಸ ಪ್ರಿಯರಿಗೆ ಬಲು ಅಚ್ಚುಮೆಚ್ಚಿನ ತಾಣವೆನಿಸಿದೆ.

ಪಟ್ಟಣದಿಂದ ಅಂದಾಜು 3 ಕಿ.ಮೀ. ದೂರವಿರುವ ಈ ಜಲಪಾತ ಕೋಟೆಕಲ್ಲ ಗ್ರಾಮಕ್ಕೆ ಹೊಂದಿಕೊಂಡಿರುವ ವಿಶಾಲವಾದ ಗುಡ್ಡದ ಮೇಲೇರಿದರೆ ಕಾಣಿಸಿಗುತ್ತದೆ.

ಗುಡ್ಡದ ಕೊಳ್ಳದಲ್ಲಿ ಅಂದಾಜು 25 ಅಡಿ ಎತ್ತರದಿಂದ ಹಾಲಿನಂತೆ ಜಲ ಧುಮುಕುತ್ತಿದೆ. ಅಲ್ಲದೆ, ಇಲ್ಲಿನ ಪರಿಸರ ಮಲೆನಾಡನ್ನು ನೆನಪಿಸುತ್ತಿದ್ದು, ‘ಬಯಲುನಾಡಿನ ಜೋಗ’ ಎಂದೇ ಪ್ರಸಿದ್ಧಿಯಾಗಿದೆ.

ಜಿಲ್ಲೆ ಸೇರಿ ವಿವಿಧ ಗ್ರಾಮಗಳಿಂದ ಯುವಕರು, ಯುವತಿಯರಷ್ಟೇ ಅಲ್ಲದೆ ಕುಟುಂಬ ಸಮೇತರಾಗಿ ಗುಳೇದಗುಡ್ಡ-ಕೋಟೆಕಲ್ಲ ಫಾಲ್ಸ್‌ಗೆ ಭೇಟಿ ನೀಡುತ್ತಿರುವುದು ಸಾಮಾನ್ಯವಾಗಿದೆ.

ತಾಲೂಕಿನ ಕೆಲವಡಿ, ಕೋಟೆಕಲ್ಲ, ಲಾಯದಗುಂದಿ, ಆಸಂಗಿ, ಪರ್ವತಿ, ತೋಗುಣಶಿ, ತೆಗ್ಗಿ, ಹಂಸನೂರ, ಪಾದನಕಟ್ಟಿ, ಅಲ್ಲೂರ ಎಸ್.ಪಿ. ಸೇರಿ ವಿವಿಧೆಡೆ ಉತ್ತಮ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net