

ಗುಂಡ್ಲುಪೇಟೆ: ಬಂಡೀಪುರ ಸಫಾರಿ ಮಾರ್ಗ ಹಾಗೂ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಇತ್ತೀಚೆಗೆ ಭರ್ಜರಿ ಹೆಬ್ಬುಲಿಗಳು ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರಲ್ಲಿ ಪುಳಕವುಂಟು ಮಾಡುತ್ತಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಗೆ ಹೋಗುವ ಪ್ರವಾಸಿಗರಿಗೂ ಹುಲಿಗಳು ದರ್ಶನ ನೀಡುತ್ತಿವೆ. ಬೇಸಿಗೆ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿಗಳು ಇತ್ತೀಚೆಗೆ ಕಂಡುಬರುತ್ತಿಲ್ಲ ಎಂಬುದು ಪ್ರವಾಸಿಗರ ಅಳಲಾಗಿದೆ. ನಿರಂತರ ಮಳೆಯಿಂದ ಗಿಡಗಟಿಗಳು ಹಾಗೂ ಪೊದೆಗಳು ಸಮೃದ್ಧವಾಗಿ ಬೆಳೆದ ಅರಣ್ಯ ಪ್ರದೇಶದಲ್ಲಿ ಹುಲಿಗಳು ದರ್ಶನ ನೀಡುತ್ತಿರುವುದು ವಿರಳವಾಗುತ್ತಿದೆ.
ಆದರೆ ಕಳೆದ ಎರಡು ದಿನಗಳ ಹಿಂದೆ ಸಫಾರಿ ಮಾರ್ಗದ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಭಾರೀ ಗಾತ್ರದ ಹೆಬ್ಬುಲಿ ಕಾಣಿಸಿಕೊಂಡಿದೆ. ಸುಮಾರು 12 ವರ್ಷ ವಯಸ್ಸಿನ ಹೆಬ್ಬುಲಿ ಸುಮಾರು 20 ನಿಮಿಷಗಳ ಕಾಲ ಮಲಗಿ ದರ್ಶನ ನೀಡಿದ ಹುಲಿ ಆಕಳಿಸುವಾಗ ಬಾಯಿಯಲ್ಲಿ ಎಡ ದವಡೆಯ ಕೋರೆ ಹಲ್ಲು ಬಿದ್ದಿರುವುದು ಚಿತ್ರಗಳಲ್ಲಿ ಸ್ಪಷ್ಟವಾಗಿ ಮೂಡಿ ಬಂದಿವೆ. ನಂತರ ಹುಲಿ ಅರಣ್ಯದೊಳಗೆ ನಿಧಾನಕ್ಕೆ ನಡೆದು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಬಂಡೀಪುರಕ್ಕೆ ಬಂದಿರುವ ಹೊಸ ಹುಲಿಯಾಗಿದ್ದು, ಇದನ್ನು ಇಲ್ಲಿಯವರೆಗೆ ಎಲ್ಲಿಯೂ ನೋಡಿಲ್ಲ ಎಂದು ಸಫಾರಿ ಸಿಬ್ಬಂದಿ ತಿಳಿಸಿದ್ದಾರೆ.
ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿದ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ದಟ್ಟಾರಣ್ಯವನ್ನು ಹೊಂದಿದ್ದು ಹುಲಿಗಳ ಆವಾಸ ತಾಣವಾಗಿದ್ದರೂ ಪ್ರವಾಸಿಗರಿಗೆ ಹುಲಿಗಳ ದರ್ಶನ ತುಂಬಾ ವಿರಳವಾಗಿತ್ತು. ಆದರೆ ಇತ್ತೀಚೆಗೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರಯಾಣಿಕರಿಗೆ ಭಾರೀ ಗಾತ್ರದ ಹುಲಿಯೊಂದು ಕಾಣಿಸಿಕೊಳ್ಳುತ್ತಿದೆ. ಮುಂಜಾನೆ 8 ಗಂಟೆಗೆ ಬೆಟ್ಟಕ್ಕೆ ಹೋಗುವ ಮೊದಲ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಹುಲಿಯ ಚಿತ್ರವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಸಫಾರಿ ಮಾರ್ಗದಲ್ಲಿ ತನ್ನ ಎರಡು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಸುಂದರಿ ಹೆಸರಿನ ಹುಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು.
* ಇತ್ತೀಚೆಗೆ ಸಫಾರಿ ವಲಯದಲ್ಲಿ ಭಾರೀ ಗಾತ್ರದ ಹೆಬ್ಬುಲಿಯೊಂದು ಕಾಣಿಸಿಕೊಳ್ಳುತ್ತಿದ್ದು ಸಂಪೂರ್ಣ ಆರೋಗ್ಯವಾಗಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಪ್ರಯಾಣಿಕರಿಗೂ ಹುಲಿ ಕಾಣಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.
ಮಲ್ಲೇಶ್, ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ