ಪ್ರವಾಸಿ ತಾಣ ವಾಣಿ ವಿಲಾಸ ಸಾಗರದ ಪ್ರಕೃತಿ ವಿಹಾರ ವನಕ್ಕೆ ಬೀಗ

Vani Vilasa Sagar, Prakriti Vihar
Published on

ಖಂಡೇನಹಳ್ಳಿ ಬಸವರಾಜ ಹಿರಿಯೂರು

ಪ್ರವಾಸಿಗರ ಮನಸ್ಸು ಅರಳಿಸಬೇಕಿದ್ದ ವಿವಿ ಸಾಗರದ ಧನ್ವಂತರಿ ಗಿಡಮೂಲಿಕೆ ಉದ್ಯಾನವನ ಕಳೆದ ಎರಡು-ಮೂರು ವರ್ಷಗಳಿಂದ ನಿರ್ವಹಣೆ ಕೊರತೆಗೆ ತುತ್ತಾಗಿ ಪಾಳು ಬಿದ್ದಿದೆ. ಪ್ರವಾಸಿಗರಿಗಾಗಿಯೇ 4 ಎಕರೆ ವಿಶಾಲ ಜಾಗದಲ್ಲಿ ಅರಣ್ಯ ಇಲಾಖೆ ಗಿಡಮೂಲಿಕೆ ಉದ್ಯಾನ ನಿರ್ಮಿಸಿದೆ. ಜಲಾಶಯ ಹಾಗೂ ಕಣಿವೆ ಮಾರಮ್ಮ ದೇವಿ ದರ್ಶನಕ್ಕೆ ಆಗಮಿಸಿದವರು ಇಲ್ಲಿ ತುಸು ಹೊತ್ತು ವಿರಮಿಸಿ ಹೋಗುವುದು ರೂಢಿ. ಯಾವಾಗ ಅರಣ್ಯ ಇಲಾಖೆ ನಿರ್ವಹಣೆ ಅಸಾಧ್ಯ ಎಂದು ಕೈ ಚೆಲ್ಲಿತೋ ಆಗ ಪಾರ್ಕ್‌ಗೆ ಬೀಗಮುದ್ರೆ ಹಾಕಿ ಸುಮ್ಮನಾಯಿತು. ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನಹರಿಸಿಲ್ಲ.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವಿಶ್ರಾಂತಿ ಪಡೆಯಲು ಉದ್ಯಾನವನದ ಸುತ್ತ ದೃಷ್ಟಿ ಹಾಯಿಸಿದಾಗ ಎಲ್ಲೆಂದರಲ್ಲಿ ಬೆಳೆದು ನಿಂತಿರುವ ಗಿಡ-ಗಂಟಿಗಳು, ಪ್ರವೇಶ ದ್ವಾರದ ಗೇಟ್‌ಗೆ ಬೀಗ ಹಾಕಿರುವುದು ಬೇಸರ ಮೂಡಿಸುತ್ತದೆ. ಇಲ್ಲಿನ ಕಣಿವೆ ಮಾರಮ್ಮ ಹಾಗೂ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಹಕ್ಕಿ-ಪಕ್ಷಿಗಳ ಕಲರವ: ನೂರಾರು ಗಿಳಿ, ಅಳಿಲು, ಕೋಗಿಲೆ, ಪಾರಿವಾಳ ಇತರ ಜೀವ ಸಂಕುಲಗಳು ಉದ್ಯಾನದ ಮರಗಳನ್ನು ಆಶ್ರಯಿಸಿದ್ದವು. ಇಲ್ಲಿ ಕುಳಿತರೆ ಹಕ್ಕಿಗಳ ಕಲರವ ಮನಸ್ಸಿಗೆ ನೆಮ್ಮದಿ ನೀಡುತ್ತಿತ್ತು. ನಿರ್ವಹಣೆ ಇಲ್ಲದ ಉದ್ಯಾನಕ್ಕೆ ಬೀಗ ಜಡಿದಿದ್ದು ಜನರಷ್ಟೇ ಅಲ್ಲ ಪಕ್ಷಿಗಳೂ ಬಾರದಂತಾಗಿವೆ. ನಿರ್ವಹಣೆ ಕೊರತೆಯಿಂದ ಇಂದು ಹಾಳು ಕೊಂಪೆಯಾಗಿದೆ. 2002-03ರಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಪ್ರಕೃತಿ ವಿಹಾರ ವನ ನಿರ್ಮಿಸಿದ್ದು, 2011 ರವರೆಗೆ ಅರಣ್ಯ ಇಲಾಖೆ ಉತ್ತಮವಾಗಿ ನಿರ್ವಹಣೆ ಮಾಡಿದ್ದು, ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿರ್ವಹಣೆಗೆ ಒಂದು ಕಮಿಟಿ ರಚಿಸಲಾಗಿತ್ತು. (ಸಿಇಒ, ತಹಸೀ ಲ್ದಾರ್, ಅರಣ್ಯ ಇಲಾಖೆ ಇತರೆ ಅಧಿಕಾರಿಗಳು) ಇಚ್ಛಾಶಕ್ತಿ ಕೊರತೆ ಯಿಂದ ನಿರ್ವಹಣೆ ಮಾಡದೆ ವಿಹಾರ ವನಕ್ಕೆ ಬೀಗ ಹಾಕಲಾಗಿದೆ.

ಪ್ರಸ್ತಾವನೆ ಸಲ್ಲಿಕೆ: ಭದ್ರಾ ನೀರು ವಿವಿ ಸಾಗರದ ಒಡಲು ಸೇರಿದ ನಂತರ ಜಲಾಶಯದ ಜಲ ವೈಭೋಗ, ಕಣಿವೆಯ ಹಸಿರು ಸೌಂದರ್ಯ ನೋಡಲು ಪ್ರವಾಸಿಗರು ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಕೃತಿ ವಿಹಾರ ವನ ನಿರ್ವಹಣೆ, ಅಭಿವೃದ್ಧಿ ಸ್ಪರ್ಶ ನೀಡಲು 2.5 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ವಿವಿ ಸಾಗರ ಜಲಾಶಯದ ಬಳಿ ಇರುವ ಪ್ರಕೃತಿ ವಿಹಾರ ವನ ನಿರ್ವಹಣೆ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಜಿಲ್ಲಾಡಳಿತ ಸಕಾರಾತ್ಮಾಕವಾಗಿ ಸ್ಪಂದಿಸಿದೆ. ಶೀಘ್ರ ಉದ್ಯಾನವನ ಪ್ರವಾಸಿಗರ ಬಳಕೆಗೆ ಲಭ್ಯವಾಗಲಿದೆ.
ಹರ್ಷ ಆರ್‌ಎಫ್‌ಒ ಅರಣ್ಯ ಇಲಾಖೆ

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ವಿವಿ ಸಾಗರ ಗುರುತಿಸಿಕೊಂಡಿದ್ದು, ಮೂಲ ಸೌಲಭ್ಯ ಕೊರತೆಯಿಂದ ಪ್ರವಾಸಿಗರು ಪರದಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಕೃತಿ ವಿಹಾರವನ ಇದ್ದು, ಇಲ್ಲದಂತಾಗಿದೆ.
ಜಯರಾಮಪ್ಪ ವಿವಿ ಪುರ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net