ತಲಕಾವೇರಿ, ಭಾಗಮಂಡಲ ಪುಣ್ಯ ಸ್ಥಳ

tourist place
Published on

ಮಡಿಕೇರಿ:

ಇಂಟರ್‌ನೆಟ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಟಕ್ಕೆ ಒಳಪಟ್ಟ ಜಗತ್ತಿನ 10 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕೊಡಗು ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ 778 ಪ್ರವಾಸಿತಾಣಗಳ ಪೈಕಿ 23 ಪ್ರವಾಸಿತಾಣಗಳು ಜಿಲ್ಲೆಯಲ್ಲೇ ಇದೆ. ಆದರೆ ಈ ಪಟ್ಟಿಯಲ್ಲಿ ಕೊಡಗಿನ ಪುಣ್ಯಕ್ಷೇತ್ರಗಳಾಗಿರುವ ತಲಕಾವೇರಿ ಮತ್ತು ಭಾಗಮಂಡಲವನ್ನೂ ಸೇರಿಸಿರುವುದಕ್ಕೆ ಸ್ಥಳೀಯ ಆಸ್ತಿಕರಿಂದ ದೊಡ್ಡ ಮಟ್ಟದಲ್ಲಿ ವಿರೋಧ ಇರುವುದರಿಂದ ಇವೆರಡೂ ಸ್ಥಳಗಳನ್ನು ಧಾರ್ಮಿಕ ಕ್ಷೇತ್ರಗಳ ಪಟ್ಟಿಗೆ ಸೇರಿಸುವಂತೆ ಪ್ರವಾಸೋದ್ಯಮ ಇಲಾಖೆ ಮೂಲಕ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ.

ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಕೊಡಗಿನವರ ಪಾಲಿಗೆ ಪವಿತ್ರ ಪುಣ್ಯ ಕ್ಷೇತ್ರಗಳು. ವರ್ಷದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎನ್ನುವುದು ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಮಗುವಿನ ಜನನದಿಂದ ವ್ಯಕ್ತಿಯ ಮರಣದ ತನಕವೂ ಒಂದಿಲ್ಲೊAದು ರೀತಿಯಲ್ಲಿ ಶ್ರೀ ಕ್ಷೇತ್ರಗಳು ಸ್ಥಳೀಯರ ಜೀವನದಲ್ಲಿ ಧಾರ್ಮಿಕವಾಗಿ ಬೆಸೆದುಕೊಂಡಿದೆ. ಮದುವೆಯಾದ ಹೊಸದರಲ್ಲಿ ನವಜೋಡಿ ಶ್ರೀ ಕ್ಷೇತ್ರಕ್ಕೆ ತೆರಳಿ ಪವಿತ್ರ ಸ್ನಾನ ಮಾಡಬೇಕು. ಮಗುವಿನ ಮೊದಲ ಕೂದಲು ಇಲ್ಲಿಯೇ ತೆಗೆಸಬೇಕು. ಮೃತರಾದವರ ಮೋಕ್ಷಕ್ಕಾಗಿ ಇಲ್ಲಿಯೇ ಪಿಂಡ ಪ್ರದಾನ ಮಾಡಬೇಕು ಎನ್ನುವುದನ್ನು ತಲೆತಲಾಂತರದಿAದ ರೂಢಿಸಿಕೊಂಡು ಬಂದವರಿದ್ದಾರೆ.

ಪ್ರತಿ ವರ್ಷ ಅಕ್ಟೋಬರ್ 17 ಅಥವಾ 18ಕ್ಕೆ ಶ್ರೀ ಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಜರುಗುವ ಪವಿತ್ರ ತೀಥೋದ್ಭವಕ್ಕೂ ಅದರದ್ದೇ ಆದ ಮಹತ್ವವಿದೆ. ನಂತರದ ಒಂದು ತಿಂಗಳು ತುಲಾ ಮಾಸದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲೂ ಕೊಡಗಿನವರು ಮಾತ್ರವಲ್ಲದೆ ಪಕ್ಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ತುಲಾ ಮಾಸದಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ತೀರ್ಥ ಸ್ನಾನ ಮಾಡಿದರೆ ಗಂಗಾ ನದಿಯಲ್ಲಿ ಸ್ನಾನ ಮಾಡಿದಷ್ಟೇ ಫಲ ಸಿಗುತ್ತದೆ ಎನ್ನುವ ನಂಬಿಕೆ ಆಸ್ತಿಕರಲ್ಲಿದೆ. ಇದರ ಜತೆಗೆ ವರ್ಷ ಪೂರ್ತಿ ನಡೆಯುವ ಒಂದಿಲ್ಲೊAದು ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ಶ್ರೀ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ.

ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳಾಗಿ ಗುರುತಿಸಿಕೊಂಡಿರುವುದರಿAದ ಇಲ್ಲಿಗೆ ಭೇಟಿ ನೀಡುವ ಭಕ್ತರು ಶುಚಿರ್ಭೂತರಾಗಿರುತ್ತಾರೆ. ಶ್ರೀ ಕ್ಷೇತ್ರಗಳಿಗೆ ತೆರಳುವುದಕ್ಕೂ ಮೊದಲು ಅನೇಕ ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ಕೆಲವು ದಿನಗಳ ತನಕ ಮಾಂಸಾಹಾರ ಬಿಟ್ಟಿರುತ್ತಾರೆ. ಮದ್ಯ ಸೇವನೆಯನ್ನೂ ಮಾಡುವುದಿಲ್ಲ. ಮಹಿಳೆಯರು ಕೂಡ ಕ್ಷೇತ್ರಕ್ಕೆ ಭೇಟಿ ನೀಡುವ ಮೊದಲು ಅನೇಕ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಾರೆ. ಸಾಂಪ್ರದಾಯಿಕ ವಸ್ತçಗಳು ಅಥವಾ ಸಭ್ಯ ಬಟ್ಟೆಗಳನ್ನೇ ಧರಿಸಲಾಗುತ್ತದೆ. ಈ ರೀತಿಯಾಗಿ ಕಟ್ಟುಪಾಡುಗಳನ್ನು ಪಾಲಿಸದೇ ಇಲ್ಲಿಗೆ ತೆರಳಿದರೆ ಒಳಿತಾಗುವುದಿಲ್ಲ ಎನ್ನುವ ನಂಬಿಕೆಯೂ ಇದೆ.

ಈ ಎರಡೂ ಕ್ಷೇತ್ರಗಳಿಗೆ ಭಕ್ತರ ಜತೆಯಲ್ಲಿ ಪ್ರವಾಸಿಗರೂ ತೆರಳುತ್ತಾರೆ. ಆದರೆ ಭಕ್ತರ ರೀತಿಯಲ್ಲಿ ಕಟ್ಟುಪಾಡುಗಳು ಪ್ರವಾಸಿಗರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇದೇ ವಿಷಯಲ್ಲಿ ಇಲ್ಲಿ ಸಾಕಷ್ಟು ಬಾರಿ ಭಕ್ತರು ಮತ್ತು ಪ್ರವಾಸಿಗರ ಮಧ್ಯೆ ಘರ್ಷಣೆಗಳೂ ಆಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಧರಿಸುವ ಬಟ್ಟೆ ಬಗ್ಗೆ ಆಕ್ಷೇಪಣೆಗಳಿವೆ. ಪುಣ್ಯ ಕ್ಷೇತ್ರದಲ್ಲಿ ಗದ್ದಲ ಎಬ್ಬಿಸಿಕೊಂಡು ತಿರುಗಾಡುವುದನ್ನೂ ವಿರೋಧಿಸಲಾಗುತ್ತದೆ. ಪ್ರವಾಸಿಗರಿಂದಾಗಿ ನೆಮ್ಮದಿಯಿಂದ ಪೂಜೆ ಸಲ್ಲಿಸಲಾಗುವುದಿಲ್ಲ ಎಂದು ದೂರುವ ಭಕ್ತರೂ ಇದ್ದಾರೆ. ಇವೆಲ್ಲದರ ಮಧ್ಯೆ ಕೊಡಗಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾಗಮಂಡಲ ಮತ್ತು ತಲಕಾವೇರಿ ಸೇರಿಸಿರುವುದಕ್ಕೆ ಮೊದಲಿನಿಂದಲೂ ತೀವ್ರ ವಿರೋಧ ಇದೆ.

ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ಅನ್ವಯ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದಲ್ಲಿ 778 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯಲ್ಲಿ ರಾಜರ ಗದ್ದುಗೆ, ಮಡಿಕೇರಿ ಕೋಟೆ, ನಾಲ್ಕು ನಾಡು ಅರಮನೆ, ಅಬ್ಬಿ ಜಲಪಾತ, ಮಾಂದಲ್ ಪಟ್ಟಿ, ರಾಜಾಸೀಟು, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಮಲ್ಲಳ್ಳಿ ಜಲಪಾತ, ನಿಶಾನಿಮೊಟ್ಟೆ, ಚೇಲಾವರ ಜಲಪಾತ, ಇರ್ಪು ಜಲಪಾತ, ದುಬಾರೆ, ಚೆಟ್ಟಳ್ಳಿ ಫಾರ್ಮ್ ಹೊನ್ನಮ್ಮನ ಕೆರೆ, ಮಕ್ಕಳಗುಡಿ ಬೆಟ್ಟ, ಚಿಕ್ಕಿಹೊಳೆ, ಕುಂದಬೆಟ್ಟ, ಬರ್ಪುಹೊಳೆ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಾಗೂ ತಲಕಾವೇರಿ-ಭಾಗಮಂಡಲ ದೇವಾಲಯಗಳು ಸೇರಿ 23 ಪ್ರವಾಸಿ ತಾಣಗಳನ್ನು ಹೆಸರಿಸಲಾಗಿದೆ.

ಶ್ರೀ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲವನ್ನು ಪ್ರವಾಸಿತಾಣವಾಗಿ ಸರ್ಕಾರವೇ ಘೋಷಣೆ ಮಾಡಿರುವುದರಿಂದ ಕ್ಷೇತ್ರದ ಪಾವಿತ್ರö್ಯತೆ ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎನ್ನವುದು ಭಕ್ತರ ಆತಂಕ. ಈ ಎರಡೂ ಕ್ಷೇತ್ರಗಳು ಪ್ರವಾಸಿತಾಣಗಳ ಪಟ್ಟಿಯಲ್ಲಿದ್ದು, ಕೊಡಗಿಗೆ ಪ್ರವಾಸ ಆಯೋಜಿಸುವ ಸಂದರ್ಭ ಇವುಗಳನ್ನೂ ಇತರ ಪ್ರವಾಸಿ ತಾಣಗಳಂತೆ ಮೋಜಿನ ಸ್ಥಳಗಳು ಎಂದು ತಪ್ಪಾಗಿ ಭಾವಿಸುವ ಸಂದರ್ಭಗಳೇ ಹೆಚ್ಚು ಇರುತ್ತದೆ. ಹಾಗಾಗಿ ಆಸ್ತಿಕರ ರೀತಿಯಲ್ಲಿ ಭಕ್ತರಿಂದ ಕ್ಷೇತ್ರದ ಕಟ್ಟುಪಾಡುಗಳ ಪಾಲನೆ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನವುದು ಭಕ್ತರ ಅಭಿಪ್ರಾಯ. ಹಾಗಾಗಿಯೇ ಮೊದಲಿನಿಂದಲೂ ತಲಕಾವೇರಿ ಮತ್ತು ಭಾಗಮಂಡಲವನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ತೆಗೆದು ಧಾರ್ಮಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿಕೊಂಡು ಬರಲಾಗುತ್ತಿದೆ.

ಕೊಡಗಿನ ಆಸ್ತಿಕರು, ಭಕ್ತರ ನಂಬಿಕೆಯನ್ನ ಗೌರವಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಇದೀಗ ಪುಣ್ಯ ಕ್ಷೇತ್ರಗಳಾದ ತಲಕಾವೇರಿ ಮತ್ತು ಭಾಗಮಂಡಲವನ್ನು ಕೊಡಗಿನ ಪ್ರವಾಸಿತಾಣಗಳ ಪಟ್ಟಿಯಿಂದ ತೆಗೆಯಲು ನಿರ್ಧರಿಸಿದೆ. ಈ ಸಂಬAಧ ಪ್ರವಾಸೋದ್ಯ ಇಲಾಖೆ ಆಯುಕ್ತರಿಗೆ ಜಿಲ್ಲಾ ಪ್ರವಾಸೋದ್ಯಮ ಉಪನಿರ್ದೇಶಕಿ ಅನಿತಾ ಭಾಸ್ಕರ್ ಕೋರಿಕೆ ಸಲ್ಲಿಸಿದ್ದು, ಇವೆರಡೂ ಸ್ಥಳಗಳನ್ನು ಧಾರ್ಮಿಕ ಕ್ಷೇತ್ರಗಳ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದಾರೆ. ಇಲಾಖೆಯ ಈ ನಡೆಯನ್ನು ಸ್ವಾಗತಿಸಿರುವ ಜಿಲ್ಲೆಯ ಆಸ್ತಿಕರು ಆದಷ್ಟು ಬೇಗ ಈ ಕೋರಿಕೆ ಕಾರ್ಯರೂಪಕ್ಕೆ ಬರಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಒಳಗೊಂಡ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರವಾಸಿಗರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಶ್ರೀ ಕ್ಷೇತ್ರಕ್ಕೆ ಉತ್ತಮ ಆದಾಯವೂ ಬರುತ್ತಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ಮಾಹಿತಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಒಟ್ಟು 9.75 ಕೋಟಿ ರೂ. ಆದಾಯ ಬಂದಿದೆ.

2019-20ರಲ್ಲಿ 1.86 ಕೋಟಿ ರೂ., 2020-21ರಲ್ಲಿ 1.07 ಕೋಟಿ ರೂ., 2021-22ರಲ್ಲಿ 1.42 ಕೋಟಿ ರೂ., 2022-23ರಲ್ಲಿ 2.96 ಕೋಟಿ ರೂ. ಹಾಗೂ 2023-24ರಲ್ಲಿ 2.43 ಕೋಟಿ ರೂ. ಆದಾಯ ದೇವಾಲಯದ ಕಾಣಿಕೆ, ಸೇವೆ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹ ಆಗಿದೆ.

ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ಅನ್ವಯ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದಲ್ಲಿ 778 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಜಿಲ್ಲೆಯ 23 ಪ್ರವಾಸಿತಾಣಗಳನ್ನು ಹೆಸರಿಸಲಾಗಿದೆ. ಶ್ರೀ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿ ಕೂಡ ಈ ಪ್ರವಾಸಿತಾಣಗಳ ಪಟ್ಟಿಯಲ್ಲಿ ಇದೆ. ಆದರೆ ಈ ಎರಡೂ ಕ್ಷೇತ್ರಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟು ಧಾರ್ಮಿಕ ಕ್ಷೇತ್ರಗಳ ಪಟ್ಟಿಗೆ ಸೇರಿಸುವಂತೆ ಪ್ರವಾಸೋದ್ಯಮ ಇಲಾಖೆಯ ಆಯುಕ್ತರಲ್ಲಿ ಕೋರಲಾಗಿದೆ.

ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net