ಪ್ರೇಕ್ಷಣೀಯ ತಾಣ ಪ್ರವೇಶ ದುಬಾರಿ

tourist
Published on

ಮಡಿಕೇರಿ:

ಜಗತ್ಪçಸಿದ್ಧ ಪ್ರವಾಸಿತಾಣವಾಗಿ ಪ್ರವರ್ಧಮಾನಕ್ಕೆ ಬಂದಿರುವ ಕೊಡಗಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಸಿಂಹಪಾಲು ಅರಣ್ಯ ಇಲಾಖೆಯ ಸುಪರ್ದಿಗೆ ಬರುತ್ತದೆ. ಇದನ್ನೇ ತನ್ನ ಲಾಭಕ್ಕೆ ಬಳಸಿಕೊಂಡಿರುವ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ತನ್ನ ವ್ಯಾಪ್ತಿಯ ಪ್ರವಾಸಿ ಸ್ಥಳಗಳಲ್ಲಿ ಮನಬಂದAತೆ ಶುಲ್ಕ ಏರಿಸುವ ಮೂಲಕ ಪ್ರವಾಸಿಗರನ್ನು ಹಗಲು ದರೋಡೆ ಮಾಡಲು ಇಳಿದಿರುವ ಆರೋಪ ಎದುರಿಸುತ್ತಿದೆ.

ದುಬಾರೆ ಸಾಕಾನೆ ಶಿಬಿರ, ಮತ್ತಿಗೋಡು ಸಾಕಾನೆ ಶಿಬಿರ, ನಾಗರಹೊಳೆ ಅಭಯಾರಣ್ಯ, ಇರ್ಪು ಫಾಲ್ಸ್, ಮಾಂದಲಪಟ್ಟಿ, ವಿವಿಧೆಡೆ ಹರಡಿಕೊಂಡಿರುವ ಟ್ರಕ್ಕಿಂಗ್ ಹಾದಿಗಳು... ಹೀಗೆ ಎಲ್ಲೆಲ್ಲಿ ಸಾಧ್ಯವೋ ಎಲ್ಲಾ ಕಡೆಗಳಲ್ಲಿ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಅಭಯಾರಣ್ಯಗಳ ಮೂಲಕ ಹಾದು ಹೋಗುವ ಹೆದ್ದಾರಿಗಳನ್ನೂ ಬಿಡದೆ ಅಲ್ಲಿಯೋ ಟೋಲ್ ಸಂಗ್ರಹಿಸುವ ಮೂಲಕ ಅರಣ್ಯ ಇಲಾಖೆ ಧನದಾಹ ಪ್ರದರ್ಶಿಸಿಸುತ್ತಿದೆ.

ಆಗಸ್ಟ್ನಲ್ಲಿ ದುಬಾರೆಯಲ್ಲಿ ಪ್ರವೇಶ ಶುಲ್ಕ ದುಪ್ಪಟ್ಟು ಮಾಡಲಾಗಿತ್ತು. ಇದಕ್ಕೆ ಸ್ಥಳೀಯರು, ಪ್ರವಾಸೋದ್ಯಮಿಗಳಿಂದ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಈ ತಿಂಗಳ 1 ರಿಂದ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿ ರಜಾದಿನಗಳ ಪ್ರವೇಶ ಶುಲ್ಕ ಮಾತ್ರ ಸ್ವಲ್ಪ ಕಡಿಮೆ ಮಾಡಲಾಗಿದೆ. ಉಳಿದಂತೆ ಹೆಚ್ಚಳವಾದ ದರ ಹಾಗೆಯೇ ಮುಂದುವರಿದಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಅರಣ್ಯ ಇಲಾಖೆಗೆ ಶಾಪ ಹಾಕುವಂತಾಗಿದೆ.

ಪ್ರವಾಸಿ ತಾಣಗಳನ್ನು 'ತೆರೆದ ತರಗತಿಯ ಮೌಲ್ಯ ಶಿಕ್ಷಣ ಕೇಂದ್ರ'ಗಳು ಎಂದು ಬಣ್ಣಿಸಲಾಗುತ್ತದೆ. ಪ್ರಾಣಿಗಳ ಸಹಜೀವನ, ಹಕ್ಕಿಗಳ ಇಂಚರ, ಹಸಿರು ಮೇವು, ಶುದ್ಧ ಪರಿಸರ ಶುದ್ಧ ಗಾಳಿ, ಉಲ್ಲಾಸಗೊಳಿಸುವ ಅರಣ್ಯ, ವಿಭಿನ್ನ ಸಸ್ಯ ವರ್ಗವನ್ನು ಪ್ರವಾಸಿಗರು ಸ್ವಚ್ಛಂದವಾಗಿ ಅನುಭವಿಸುವಂತಾಗಬೇಕು. ಹಾಗಾಗಿ ಪ್ರವೇಶತಾಣಗಳ ಶುಲ್ಕ ಜೇಬಿಗೆ ಭಾರ ಆಗುವಂತೆ ಇರಬಾರದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನಹರಿಸಲಿ ಎನ್ನುವುದು ಪ್ರಜ್ಞಾವಂತರ ಆಶಯ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಬೇಕಾದರೆ, ಪ್ರವಾಸಿಗರಿಗೆ ಪ್ರವೇಶ ಶುಲ್ಕದ ಹೆಸರಿನಲ್ಲಿ ಶೋಷಣೆ ಮಾಡಬಾರದು. ದುಬಾರಿ ಶುಲ್ಕ ವಸೂಲಿ ಮಾಡದಂತೆ ಸರ್ಕಾರದ ಅಧೀನ ಇಲಾಖೆಗಳಿಗೆ ಸರ್ಕಾರ ಕಟ್ಟುನಿಟ್ಟಿನ ಅದೇಶ ನೀಡಬೇಕು. ಪ್ರವಾಸೋದ್ಯಮ ಇಲಾಖೆಯೂ ಈ ಬಗ್ಗೆ ಗಮನ ಹರಿಸಬೇಕು.

ಎ.ಜೆ. ಕೃಷ್ಣಪ್ಪ, ಕೃಷಿಕ, ದೊಡ್ಡತೋಳೂರು ಗ್ರಾಮ

ಪ್ರವಾಸಿ ತಾಣಗಳೆಲ್ಲವೂ ಪ್ರವಾಸಿಗರಿಗೆ 'ತೆರೆದ ತರಗತಿಯ ಮೌಲ್ಯ ಶಿಕ್ಷಣ ಕೇಂದ್ರ'ಗಳೇ ಹೌದು. ಪ್ರಾಣಿಗಳ ಸಹಜೀವನ, ಹಕ್ಕಿಗಳ ಇಂಚರ, ಹಸಿರು ಮೇವು, ಶುದ್ಧ ಪರಿಸರ ಶುದ್ಧ ಗಾಳಿ, ಆಹಾ! ಎನ್ನುವಂತೆ ಉಲ್ಲಾಸಗೊಳಿಸುವ ಅರಣ್ಯ, ವಿಭಿನ್ನ ಸಸ್ಯ ವರ್ಗ -ಪ್ರವಾಸಿಗರಿಗೆ ಅರಣ್ಯ ಇಲಾಖೆ ಸುಖ ಕೊಡುತ್ತಿದೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ಆದರೆ.... ದುಬಾರಿ ಪ್ರವೇಶ ಶುಲ್ಕ ದಿಂದಾಗಿ ಪ್ರವಾಸಿಗರು ದೂರವಾಗುತ್ತಾರಲ್ಲಾ? ಇಲಾಖೆಗೆ ನಷ್ಟವಾಗುತ್ತಲ್ಲ? ಶುಲ್ಕ ತಗ್ಗಿಸಿ ಲಾಭ ಪಡಿಯಲಿ. ಮೌಲ್ಯ ಶಿಕ್ಷಣ ಕೊಟ್ಟು ಹೆಸರು ಗಳಿಸಲಿ.

ಬಾರಿಯಂಡ ಜೋಯಪ್ಪ, ಸಾಹಿತಿ, ಮದೆನಾಡು ಗ್ರಾಮ

ಇತ್ತೀಚಿನ ವರ್ಷಗಳಲ್ಲಿ ದುಬಾರೆ ಆನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗಳು  ಬರುತ್ತಿದ್ದು ಅರಣ್ಯ ಇಲಾಖೆ ಆನೆ ಶಿಬಿರ ಪ್ರವೇಶ ಶುಲ್ಕ ದುಬಾರಿ ಮಾಡಿದೆ.  ಅರಣ್ಯ ಇಲಾಖೆ ಹಗಲು ದರೋಡೆಗೆ ಇಳಿದಂತೆ ಕಾಣುತ್ತಿದೆ. ಈ ಭಾಗಕ್ಕೆ ತೂಗು ಸೇತುವೆ ಕಲ್ಪಿಸುವಲ್ಲೂ ಸಂಬAಧಿಸಿದವರು ವಿಫಲರಾಗಿದ್ದಾರೆ

ರಾಜ, ಸಾಮಾಜಿಕ ಕಾರ್ಯಕರ್ತ, ಸಿದ್ದಾಪುರ.

ಕೊಡಗಿನಲ್ಲಿ ಪ್ರವಾಸಿಗರನ್ನು ಮುಖ್ಯವಾಗಿ ಆಕರ್ಷಿಸುತ್ತಿರುವುದು ಇಲ್ಲಿನ ಪ್ರಕೃತಿ. ಅಂತಹ

ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ದುಬಾರಿ ಮಾಡುತ್ತಿರುವುದು ಜನಸಾಮಾನ್ಯರಿಗೆ ಆರ್ಥಿಕ ಭಾರ ಉಂಟುಮಾಡುತ್ತದೆ. ಇದು ನೈಸರ್ಗಿಕ ಸುಂದರ ತಾಣಗಳನ್ನು ಆನಂದಿಸಬೇಕೆAದಿರುವವರಿಗೆ ನಿರಾಸೆ ಉಂಟುಮಾಡುತ್ತಿದೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಇದೊಂದು ಕಾರಣವಾಗಿ ಸ್ಥಳಿಯ ವ್ಯಾಪಾರಸ್ಥರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆರ್ಥಿಕ ಕಾರಣದಿಂದಲೇ ಕೊಡಗಿನ ಮಕ್ಕಳಿಗೆ ನಿಸರ್ಗ ತಾಣಗಳು ಮರೀಚಿಕೆ ಆಗುತ್ತಿದೆ.

ಹರ್ಷಿತಾ, ವಿರಾಜಪೇಟೆ ನಿವಾಸಿ

ಅರಣ್ಯ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರವಾಸಿತಾಣಗಳ ಪ್ರವೇಶ ಶುಲ್ಕ ಹೆಚ್ಚು ಮಾಡಿರುವುದು ಖಂಡನಿಯ. ಹೆಚ್ಚಿನ ಶುಲ್ಕ ಕೊಡಗಿನ ಹಾಗೂ ಹೊರಗಿನಿಂದ ಬರುವ ಮಧ್ಯಮ ವರ್ಗದ ಪ್ರವಾಸಿಗರಿಗೆ ಅನಗತ್ಯ ಹೊರೆಯಂತಾಗಿದೆ .ಅರಣ್ಯ ಇಲಾಖೆ ಈ ರೀತಿಯಾಗಿ ಪರಿಸರ ಪ್ರೇಮಿಗಳ ಸುಲಿಗೆಯನ್ನು ಮಾಡುವುದು ಸರಿಯಲ್ಲ.

ತೀರ್ಥರಾಂ ಬಿ.ಎಂ., ಹೆಗ್ಗಳ, ವಿರಾಜಪೇಟೆ

ಪ್ರಕೃತಿ ವಿಕೋಪದಿಂದ ಬೆಳೆಗಳೆಲ್ಲ ಹಾಳಾಗಿದ್ದು ಇನ್ನು ಜನರು ತಮ್ಮ ಮಕ್ಕಳೊಂದಿಗೆ ಪ್ರವಾಸಕ್ಕೆ ಬಂದರೆ ಪ್ರವಾಸಿ ತಾಣಗಳಲ್ಲಿ ವಿಪರೀತ ಶುಲ್ಕ ವಿಧಿಸಿ ಬರೆಯ ಮೇಲೆ ಬರೆಯನ್ನು ಹಾಕುವ ವಿಧಾನವನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ದುಬಾರಿ ಶುಲ್ಕವನ್ನು ಇಳಿಸಿ ಜನರಿಗೆ ಸುಲಭವಾಗಿ ಪ್ರವಾಸಿತಾಣಗಳು ಎಟುಕುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಗಣೇಶ್, ಕೃಷಿಕ, ಕ್ಯಾತೆ, ಶನಿವಾರಸಂತೆ

ಹೆಚ್ಚು ಪ್ರವೇಶ ಶುಲ್ಕ ಪಡೆದರೂ ಯಾವುದೇ ಅನುಕೂಲ, ಸವಲತ್ತನ್ನು ಮಾಡಿಕೊಡುತ್ತಿಲ್ಲ. ಸಂಪರ್ಕ, ಕೆಲವು ಕಡೆ ನೀರಿನ ವ್ಯವಸ್ಥೆ ಇಲ್ಲದೇ ಕಸದ ರಾಶಿ ಕೊಳಚೆಯ ವಾಸನೆಯಿಂದ ತುಂಬಿರುತ್ತದೆ. ಸರಿಯಾದ ವ್ಯವಸ್ಥೆ ಇದ್ದರೆ ಶುಲ್ಕ ನಗಣ್ಯ.

ಮಂಜುನಾಥ್ ಶರ್ಮ, ಅರ್ಚಕ, ಶನಿವಾರಸಂತೆ

ಅರಣ್ಯ ಇಲಾಖೆಯವರು ಸಾಮಾನ್ಯ ಪ್ರವಾಸಿಗರ ಮೇಲೆ ಕರುಣೆ ತೋರಿಸಬೇಕು. ಶ್ರೀಮಂತರಿಗೆ ಈ ದುಬಾರಿ ಶುಲ್ಕ ಹೊರೆ ಆಗದಿರಬಹುದು. ಆದರೆ ಪಾಪದ ಬಡ ಪ್ರವಾಸಿಗರು ಗೇಟ್‌ನಿಂದಲೇ ವಾಪಸ್ ಬರಬೇಕಾ? ದುಬಾರೆಯಂಥ ಸ್ಥಳಗಳಲ್ಲಿ 50 ರೂ. ಪ್ರವೇಶ ಶುಲ್ಕ, 50 ರೂ. ಬೋಟ್ ಶುಲ್ಕ ಇಟ್ಟರೆ ಅದೇ ಸಾಕಷ್ಟು ಆಗುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನ ಹರಿಸಲಿ.

ವಿ. ಕೃಷ್ಣ, ಅಧ್ಯಕ್ಷ, ಜಿಲ್ಲಾ ಮಲೆಯಾಳಿ ವಿಶ್ವಕರ್ಮ ಸಂಘ

ಅರಣ್ಯ ಇಲಾಖೆಯಿಂದ ರಾಜ್ಯಾದ್ಯಂತ ಪ್ರವಾಸಿ ತಾಣಗಳ ಶುಲ್ಕ ಹೆಚ್ಚಳ ಮಾಡಿದ್ದಾರೆ. ಇದು ರಾಜ್ಯಮಟ್ಟದಲ್ಲಿ ಆಗಿರುವ ತೀರ್ಮಾನ. ಅದರಂತೆ ಕೊಡಗಿನಲ್ಲೂ ಆಗಿದೆ. ಈ ತಿಂಗಳು ದುಬಾರೆಯಲ್ಲಿ ಪ್ರವೇಶ ಶುಲ್ಕ ಸ್ವಲ್ಪ ಇಳಿಕೆ ಆಗಿದೆ. ಇನ್ನಷ್ಟು ಇಳಿಕೆ ಮಾಡುವುದಕ್ಕೆ ಸಂಬAಧಿಸಿದAತೆ ನಮ್ಮ ಕಡೆಯಿಂದ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಲಾಗುವುದು.

ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net