ಪ್ರವಾಸಿಗರ ಆತಿಥ್ಯಕ್ಕೆ ಸಕಲ ಸಜ್ಜು

27mdk06
Published on

ಮಡಿಕೇರಿ:

ಕೊಡಗಿನಲ್ಲಿ ಒಂದು ವಾರ ಕಾಲ ಅಬ್ಬರಿಸಿದ ಮಳೆರಾಯ ನಿಧಾನಕ್ಕೆ ಶಾಂತವಾಗುತ್ತಿದ್ದಾನೆ. ನದಿ, ತೊರೆಗಳು ತುಂಬಿ ಹರಿಯುತ್ತಿದ್ದು ಜಲಪಾತಗಳಿಗೆ ಜೀವಕಳೆ ಬಂದಿದೆ. ಇದರ ಜತೆಗೆ ಜಿಲ್ಲೆಯಲ್ಲಿ ಮಳೆಗಾಲದ ಪ್ರವಾಸೋದ್ಯಮವೂ ಚಿಗುರಿಕೊಳ್ಳುತ್ತಿದೆ. ಇಲ್ಲಿಯ ಮಳೆಯನ್ನು ಅನುಭವಿಸಲು ಪ್ರವಾಸಿಗರು ಇತ್ತ ಕಡೆ ಮುಖ ಮಾಡುತ್ತಿದ್ದಾರೆ. ರೆಸಾರ್ಟ್, ಹೋಮ್‌ಸ್ಟೇಗಳು ಮುಂಗಾರಿನ ಅತಿಥಿಗಳನ್ನು ಸ್ವಾಗತಿಸಲು ವಿಶೇಷ ರೀತಿಯಲ್ಲಿ ಸಜ್ಜಾಗಿವೆ.

ಮಳೆಗಾಲದಲ್ಲಿ ಕೊಡಗನ್ನು ಕಣ್ತುಂಬಿಸಿಕೊಳ್ಳುವ ಅನುಭವವೇ ವಿಭಿನ್ನ. ಕಾಲು ಕೂಡ ಕಾಣದಂತೆ ಕವಿಯುವ ಮಂಜು, ಬಿಸಿ ಬಿಸಿ ಕಾಫಿ ಕುಡಿಯುತ್ತಾ ಮೈಯೊಳಗೆ ಬಿಸಿಯೇರಿದರೂ ದೇಹವನ್ನು ತಟ್ಟುವ ಚಳಿ, ಬಿಡುವು ಕೊಡದೇ ಜಿಟಿ ಜಿಟಿ ಸುರಿಯುತ್ತಲೇ ಇರುವ ಮಳೆ, ಅಲ್ಲಲ್ಲಿ ಜುಳು ಜುಳು ಬೀಳುವ ಝರಿಗಳು, ತುಂಬಿ ಧುಮ್ಮಿಕ್ಕುವ ಜಲಪಾತಗಳು…ಇದಕ್ಕಾಗಿಯೇ ಕೊಡಗಿನಲ್ಲಿ ಮಳೆಗಾಲದ ಪ್ರವಾಸೋದ್ಯಮ ಹುಟ್ಟಿಕೊಂಡಿದೆ.

ಮಲೆನಾಡಿನ ಮಡಿಲಲ್ಲಿ ಇರುವ ಕೊಡಗು ಪ್ರಾಕೃತಿಕ ಸಂಪತ್ತಿನಿಂದ ಶ್ರೀಮಂತವಾಗಿದೆ. ಇಲ್ಲಿಯ ಪ್ರಕೃತಿಯನ್ನು ಸವಿಯಲು ದೇಶ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಪ್ರವಾಸಿ ಸೀಸನ್‌ನಲ್ಲಿ ಮಾತ್ರವಲ್ಲದೆ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಬಲ್ಲ ಸಂಗತಿಗಳು ಜಿಲ್ಲೆಯಲ್ಲಿ ಇರುವುದು ವಿಶೇಷ. ೨೦೧೫ರಿಂದ ಈಚೆಗೆ ಹೆಚ್ಚು ಪ್ರಚಲಿತಕ್ಕೆ ಬಂದಿದ್ದ ಮಳೆಗಾಲದ ಪ್ರವಾಸೋದ್ಯಮ ೨೦೧೮, ೨೦೧೯ ಹಾಗೂ ೨೦೨೦ರ ಪ್ರಾಕೃತಿಕ ವಿಕೋಪ ಮತ್ತು ಈ ಬೆನ್ನಲ್ಲೆ ಕಾಣಿಸಿಕೊಂಡ ಕೊರೊನಾ ಕಾರಣಕ್ಕೆ ಸ್ವಲ್ಪ ತೆರೆಮರೆಗೆ ಸರಿದಿತ್ತು.

ಮಳೆಗಾಲದ ಪ್ರವಾಸೋದ್ಯಮ ಕಳೆದ ವರ್ಷದಿಂದ ಮತ್ತೆ ಜೀವ ಪಡೆದುಕೊಂಡಿದೆ. ಜೂನ್ ಕೊನೆಯ ವಾರ ಮತ್ತು ಜುಲೈ ಮೊದಲ ವಾರದಿಂದ ಶುರುವಾಗುವ ಈ ಟ್ರೆಂಡ್ ಅಕ್ಟೋಬರ್ ತನಕವೂ ಮುಂದುವರಿಯುತ್ತದೆ. ಅಷ್ಟರಲ್ಲಾಗಲೇ ದಸರಾವೂ ಬರುವುದರಿಂದ ಪ್ರವಾಸೋದ್ಯಮ ಚಟುವಟಿಕೆಯಿಂದ ಇರಲು ಮಳೆಗಾಲದ ಪ್ರವಾಸೋದ್ಯಮ ಸ್ಫೂರ್ತಿ ನೀಡುತ್ತಾ ಬಂದಿದೆ. ಈ ವರ್ಷ ಜುಲೈ ಮಧ್ಯ ಭಾಗದ ತನಕ ಕಾಡಿಸಿದ್ದ ಮಳೆರಾಯ ಕೊನೆಯ ವಾರದಲ್ಲಿ ಚುರುಕಾಗಿರುವುದು ರೈತರಿಗೆ ಮಾತ್ರವಲ್ಲದೆ ಪ್ರವಾಸೋದ್ಯಮಿಗಳಿಗೂ ಖುಷಿ ಕೊಟ್ಟಿದೆ.

ಮಳೆ ಚುರುಕಾಗುತ್ತಿದ್ದಂತೆಯೇ ಕಾವೇರಿ, ಲಕ್ಷ್ಮಣತೀರ್ಥ, ಹಾರಂಗಿ ಸೇರಿದಂತೆ ಕೊಡಗಿನ ಪ್ರಮುಖ ನದಿ, ತೊರೆಗಳು ಮೈತುಂಬಿಕೊಳ್ಳುತ್ತವೆ. ನದಿ ನೀರಿನಿಂದ ಭಾಗಮಂಡಲ, ನಾಪೋಕ್ಲು, ಕೊಂಡಂಗೇರಿ, ಸಿದ್ದಾಪುರ, ಕುಶಾಲನಗರ ಭಾಗದಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತದೆ. ಈ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಪ್ರವಾಹವನ್ನು ಕಣ್ತುಂಬಿಸಿಕೊಳ್ಳಲು ಕೂಡ ಪ್ರವಾಸಿಗರು ಇಲ್ಲಿಗೆಲ್ಲಾ ಬರುತ್ತಾರೆ ಎನ್ನುವುದನ್ನೂ ನಂಬಲೇಬೇಕು.

ಮಳೆಗಾಲದಲ್ಲಿ ಜೀವಕಳೆಯಿಂದ ಬೋರ್ಗರೆಯುವ ಜಲಪಾತಗಳನ್ನು ನೋಡುವುದು ಕೂಡ ವಿಶೇಷ ಅನುಭವ. ಸಾಮಾನ್ಯವಾಗಿ ಬೇರೆ ಅವಧಿಯಲ್ಲಿ ಮಡಿಕೇರಿ ಅಬ್ಬಿಫಾಲ್ಸ್ ಮಾತ್ರ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಇದ್ದರೆ ಮುಂಗಾರಿನಲ್ಲಿ ಸಾಲು ಸಾಲು ಜಲಸುಂದರಿಯರು ಕಣ್ಣುಮುಂದೆ ಬರುತ್ತಾರೆ. ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿಯ ಅಬ್ಬಿಮಠ ಜಲಪಾತ, ಮಾದಾಪುರದಿಂದ ಸೂರ್ಲಬ್ಬಿಗೆ ತೆರಳುವ ದಾರಿಯಲ್ಲಿರುವ ಮೇದೂರು ಜಲಪಾತ, ಹಟ್ಟಿಹೊಳೆ ಸಮೀಪದ ಮುಕ್ಕೋಡ್ಲು ಗ್ರಾಮದಲ್ಲಿರುವ ಅಬ್ಬಿಗುಂಡಿ ಜಲಪಾತ, ಮಲ್ಲಳ್ಳಿ ಫಾಲ್ಸ್, ಮಡಿಕೇರಿ ತಾಲೂಕಿನಲ್ಲಿ ನಾಪೋಕ್ಲು ಸಮೀಪದ ಚೇಲಾವರ, ಪೊನ್ನಂಪೇಟೆ ತಾಲೂಕಿನಲ್ಲಿ ಇರ್ಪು ಫಾಲ್ಸ್ ಹೀಗೆ ಹಲವು ಜಲಪಾತಗಳು ಪ್ರಸಿದ್ಧಿಯನ್ನು ಪಡೆದಿದ್ದರೆ, ಕೆಲವು ಆಸಕ್ತರು ಸುಪ್ತವಾಗಿರುವ ಜಲಪಾತಗಳಿಗೂ ಭೇಟಿ ಕೊಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ.

ಕಳೆದ ೨ ದಶಕಗಳಿಂದ ಜಿಲ್ಲೆಯಲ್ಲಿ ರಿವರ್ ರ‌್ಯಾಫ್ಟಿಂಗ್ ಸಾಹಸ ಕ್ರೀಡೆಯೂ ಜನಪ್ರಿಯವಾಗಿದೆ. ಮಳೆಗಾಲದಲ್ಲಿ ಈ ಕ್ರೀಡೆ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ವೈಟ್‌ವಾಟರ್ ಮತ್ತು ಸ್ಟಿಲ್ ವಾಟರ್ ರಿವರ್ ರ‌್ಯಾಫ್ಟಿಂಗ್‌ಗೆ ಕೊಡಗು ಹೆಸರು ಮಾಡಿದೆ. ಕುಶಾಲನಗರ ತಾಲೂಕಿನ ದುಬಾರೆ ಮತ್ತು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯಲ್ಲಿ ರ‌್ಯಾಫ್ಟಿಂಗ್ ಕ್ರೀಡೆಗೆ ಅವಕಾಶಗಳು ಇದೆ. ಜಿಲ್ಲಾಡಳಿತದ ಕಣ್ಗಾವಲಿನಲ್ಲಿ ಖಾಸಗಿ ವ್ಯಕ್ತಿಗಳು ನಡೆಸುವ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಇದ್ದಾರೆ.

ಕೊಡಗಿನಲ್ಲಿ ಒಂದೊಂದು ಊರಿನಲ್ಲೂ ಮಳೆಯ ಅನುಭವ ವಿಭಿನ್ನವಾಗಿರುತ್ತದೆ. ಇದನ್ನು ಸಾಕ್ಷೀಕರಿಸಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಮಡಿಕೇರಿಯಲ್ಲಿ ಗಾಳಿಯ ಜತೆಗೆ ಸುರಿಯುವ ಮಳೆಯಿಂದ ರಕ್ಷಣೆ ಪಡೆಯಲು ಸೂಕ್ತ ರೀತಿಯಲ್ಲಿ ಕೊಡೆ ಹಿಡಿಯುವುದು ಕೂಡ ಒಂದು ಕಲೆ. ಇದರ ಜತೆಗೆ ಎದುರಿದ್ದವರೂ ಕಾಣದಂತೆ ಕವಿಯುವ ಮಂಜು, ಮೈ ಕೊರೆಯುವ ಚಳಿ ಇಲ್ಲಿಯ ವಿಶೇಷ. ಭಾಗಮಂಡಲದಲ್ಲಿ ಒಮ್ಮೆ ಮಳೆ ಸುರಿಯಲು ಶುರುವಾದರೆ ಯಾವಾಗ ಬಿಡುವು ಕೊಡುತ್ತದೆ ಎಂದು ಹೇಳಲಾಗುವುದಿಲ್ಲ. ಕುಶಾಲನಗರದಲ್ಲಿ ಮಳೆಯ ಮಧ್ಯೆ ಆಗಾಗ್ಗೆ ಬಿಸಿಲು ಇಣುಕಿ ನೋಡುತ್ತಿರುತ್ತದೆ. ಹೀಗೆ ಒಂದೊಂದು ಊರಿನಲ್ಲಿ ಮಳೆರಾಯನ ಆಟ ಒಂದೊಂದು ರೀತಿ ಇರುತ್ತದೆ.

ಮಳೆಗಾಲದಲ್ಲಿ ಕೊಡಗು ಭೇಟಿ ಒಂದು ಸುಂದರ ಅನುಭವ ಆಗಿರುತ್ತದೆ. ಆದರೆ ಎಚ್ಚರ ತಪ್ಪಿದರೆ ಕಹಿ ನೆನಪುಗಳೊಂದಿಗೆ ಮರಳಬೇಕಾಗುತ್ತದೆ. ಜಲಪಾತಗಳು, ತುಂಬಿ ಹರಿಯುವ ನದಿಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಂತು ನೋಡುವುದು ಉತ್ತಮ. ಅಲ್ಲಲ್ಲಿ ಬೀಳುವ ಮರಗಳು, ಆಗಾಗ್ಗೆ ಸಂಭವಿಸುವ ಭೂಕುಸಿತಗಳು, ವಿದ್ಯುತ್ ಕಣ್ಣಾಮುಚ್ಚಾಲೆ, ಪ್ರವಾಸದ ವೇಳಾಪಟ್ಟಿಯನ್ನು ಬದಲಾಯಿಸಬಹುದು. ಇದನ್ನು ಎದುರಿಸಲು ಕೂಡ ಮಳೆಗಾಲದ ಪ್ರವಾಸಿಗರು ಸಿದ್ಧವಾಗಿರಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net