ಪ್ರವಾಸೋದ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಬೇಕಿದೆ

mysore
Published on

ಮೈಸೂರು: ಜಿಲ್ಲೆಯವರೆ ಆದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಹಣಕಾಸು ಸಚಿವವರೂ ಆಗಿರುವ ಅವರು 15ನೇ ಬಾರಿಗೆ ಬಜೆಟ್ ಮಂಡಿಸಲು ಸನ್ನದ್ಧವಾಗಿದ್ದಾರೆ. ಈ ಬಾರಿಯ ಆಯವ್ಯಯದಲ್ಲಿ ಜಿಲ್ಲೆಗೆ ಭರಪೂರ ಕೊಡುಗೆಗಳು ಸಿಗಬಹುದೆಂಬ ನಿರೀಕ್ಷೆ ಹೆಚ್ಚಿದ್ದು, ಮುಖ್ಯವಾಗಿ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ನೀಡಬೇಕಾಗಿದೆ. ಮೈಸೂರು ನಗರವನ್ನು ಕೇಂದ್ರವಾಗಿಸಿಕೊಂಡು ಈ ಭಾಗದ ಪ್ರವಾಸೋದ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಬೇಕಿದೆ.

ದೇಶದಲ್ಲೇ ಮೈಸೂರು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಜಯಲಕ್ಷ್ಮೀವಿಲಾಸ ಸೇರಿದಂತೆ ಹತ್ತಾರು ಅರಮನೆಗಳಿವೆ.

ಚಾಮುಂಡಿಬೆಟ್ಟ, ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ, ಕಾರಂಜಿ ಕೆರೆ, ಮೃಗಾಲಯ, ರೀಜನಲ್ ಮ್ಯೂಜಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಸರ್ಕಾರಿ ಗಂಧದ ಎಣ್ಣೆ ಕಾರ್ಖಾನೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕಬಿನಿ, ಕೆಆರ್‌ಎಸ್ ಅಣೆಕಟ್ಟೆ, ಸಮೀಪದ ಬೈಲುಕುಪ್ಪೆ, ಶ್ರೀರಂಗಪಟ್ಟಣ, ನಂಜನಗೂಡು ಮತ್ತು ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಗಳು ವಿಶ್ವದ ಗಮನ ಸೆಳೆಯುತ್ತಿವೆ. ಇಲ್ಲಿನ ಪ್ರವಾಸೋದ್ಯಮವನ್ನು ನಂಬಿ ನೂರಾರು ಜನರು ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಸಾವಿರಾರು ಕುಟುಂಬಗಳು ಬದುಕು ಕಂಡುಕೊಂಡಿವೆ. ಒಟ್ಟಿನಲ್ಲಿ ಮೈಸೂರಿಗೆ ಪ್ರವಾಸೋದ್ಯಮವೇ ಜೀವಾಳ.

ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ರೂಪಿಸಿ ಪ್ರವಾಸಿ ತಾಣಗಳ ಅಭಿವೃದ್ಧಿ ಜತೆಗೆ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಬೇಕಾಗಿದೆ. ಮೈಸೂರನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯಿಂದ ದಸರಾ ಮಹೋತ್ಸವದ ರೀತಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ನಗರಕ್ಕೆ ಪ್ರವಾಸಿಗರನ್ನು ಸೆಳೆಯುವಂತೆ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಮೈಸೂರಿಗೆ ಪ್ರವಾಸೋದ್ಯಮ ಕ್ಯಾಲೆಂಡರ್ ರೂಪಿಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಯೋಜನೆ ಘೋಷಣೆ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net