ಪ್ರವಾಸೋದ್ಯಮ ನೀತಿ ಜಾರಿ

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಬೆಟ್ಟದ ವಿವಿಧೆಡೆ ಸಚಿವ ಎಚ್​.ಕೆ.ಪಾಟೀಲ್​ ಪರಿಶೀಲಿಸಿದರು. ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಮಂಜುನಾಥ್​, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯಶ್ವಂತ್​ ಕುಮಾರ್​, ಕೆ.ಎಸ್​.ಟಿ.ಡಿ. ನಿಗಮದ ಸಹಾಯಕ ವ್ಯವಸ್ಥಾಪಕ ದೇವರಾಜು ಮತ್ತಿತರರು ಇದ್ದರು.
Sheegrha Pravasodyama neeti Jari
Published on


ನಂದಿಯಲ್ಲಿ ಪ್ರವಾಸೋದ್ಯಮ ಖಾತೆ ಸಚಿವ ಎಚ್​.ಕೆ.ಪಾಟೀಲ್​ ಮಾಹಿತಿ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ರಾಜ್ಯದಲ್ಲಿ ತಿಂಗಳೊಳಗೆ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಲಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಎಚ್​.ಕೆ.ಪಾಟೀಲ್​ ತಿಳಿಸಿದ್ದಾರೆ.
ನಂದಿ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಯು 95 ಲ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 200 ಆಸನಗಳ ಸಾಮರ್ಥ್ಯದ ಸಮ್ಮೇಳನ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಇಷ್ಟು ದಿನ ಪ್ರವಾಸೋದ್ಯಮ ಎಂಬುದು ಶ್ರೀಮಂತರಿಗೆ ಮಾತ್ರ ಎಂಬ ಭಾವನೆ ಇತ್ತು. ಈ ಅಪವಾದವನ್ನು ತೊಡೆದು ಹಾಕಿ, ಶ್ರಮಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಬದಲಾವಣೆ ತರಲು ಚಿಂತಿಸಲಾಗಿದೆ. ಇದು ಕೃಷಿ, ಶಿಣ ಮತ್ತು ಶ್ರದ್ಧಾ ಪ್ರವಾಸಿ ಕೇಂದ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಮಂಜುನಾಥ್​, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯಶ್ವಂತ್​ ಕುಮಾರ್​, ಕೆ.ಎಸ್​.ಟಿ.ಡಿ. ನಿಗಮದ ಸಹಾಯಕ ವ್ಯವಸ್ಥಾಪಕ ದೇವರಾಜು, ವ್ಯವಸ್ಥಾಪಕ ಮನೋಜ್​ ಸೇರಿದಂತೆ ಮತ್ತಿತರರು ಇದ್ದರು.

ಪ್ರವಾಸೋದ್ಯಮದ ಸ್ಪರ್ಶ:
ತೋಟಗಾರಿಕೆ ಇಲಾಖೆಯಿಂದ ಬೆಟ್ಟದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿ ತಾಣಕ್ಕೆ ಆಧುನಿಕ ಸ್ಪರ್ಶ ನೀಡುತ್ತಿದೆ. ಪ್ರವಾಸಿಗರಿಗೆ ಸಮರ್ಪಕ ಮಾಹಿತಿ ನೀಡುವ ಸೂಚನಾ ಲಕಗಳ ಅಳವಡಿಕೆ, ಸ್ವಚ್ಛತೆ ಮತ್ತು ಶೌಚಗೃಹ ವ್ಯವಸ್ಥೆ ಉತ್ತಮಗೊಳಿಸುವುದು, ವಿಶೇಷವಾಗಿ ಸ್ವಚ್ಛತೆಗಾಗಿ 20 ಸಿಬ್ಬಂದಿ ನೇಮಕ, ಬ್ಯಾಂಬೊ ವಾಕ್​ ವೇ ಮರು ಅಭಿವೃದ್ಧಿ, ನೆಲ್ಲಿಕಾಯಿ ಬಸವಣ್ಣ ದೇವಾಲಯದ ನವೀಕರಣ, ಅಗತ್ಯವಿರುವ ಎಲ್ಲೆಡೆ ಸಿಸಿ ಕ್ಯಾಮೆರಾ, 150 ಸೋಲಾರ್​ ಲೈಟ್ಸ್​ಗಳು ಮತ್ತು ಪ್ರವಾಸಿಗರು ಕುಳಿತುಕೊಳ್ಳಲು ಹೊಸದಾಗಿ 50 ವಿಶ್ರಾಂತಿ ಆಸನ ಅಳವಡಿಕೆ ಸೇರಿದಂತೆ ನಾನಾ ಸವಲತ್ತುಗಳನ್ನು ಹೆಚ್ಚಿಸಲಾಗಿದೆ.

6 ಕೋಟಿ ಆದಾಯ:
ನಂದಿ ಗಿರಿಧಾಮದ ತಪ್ಪಲು ಮತ್ತು ಬೆಟ್ಟದ ಮೇಲೆ ವಿಶೇಷ ಪಾರ್ಕಿಂಗ್​ ಜಾಗ ಅಭಿವೃದ್ಧಿಪಡಿಸಿದ್ದು ಕಳೆದ 4 ತಿಂಗಳಲ್ಲಿ ಸುಮಾರು 6 ಕೋಟಿ ರೂ. ಆದಾಯ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ವಿವಿಧ ಮೂಲಗಳಿಂದ ಆದಾಯ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ನಂದಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್​ ತಿಳಿಸಿದ್ದಾರೆ.

ಅಭಿವೃದ್ಧಿ ಕೆಲಸ ಸಹಿಸದೆ ಆರೋಪ
ರಾಜ್ಯ ಸರ್ಕಾರದ ಗ್ಯಾರಂಟಿ ೂಷಣೆಗಳ ಅನುಷ್ಠಾನ, ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಕೆಟ್ಟ ಹೆಸರು ತರುವ ಕುತಂತ್ರ ಮಾಡಲಾಗುತ್ತಿದೆ ಎಂದು ಪೇ ಸಿಎಂ ಅಭಿಯಾನ ಮಾಡುತ್ತಿರುವವರ ವಿರುದ್ಧ ಸಚಿವ ಎಚ್​.ಕೆ.ಪಾಟೀಲ್​ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆದಿರುವ ಪತ್ರ ನಕಲಿ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆದರೂ ಪೇ ಸಿಎಂ ಮತ್ತು ಪೇ ಸಿಡಿಸಿಎಂ ಅಭಿಯಾನದ ಮೂಲಕ ಸೋಲಿನ ಹತಾಶೆಯನ್ನು ಪ್ರದರ್ಶಿಸಲಾಗುತ್ತಿದೆ. ಸರ್ಕಾರದ ಕೆಲಸಗಳನ್ನು ಸಹಿಸುವುದಕ್ಕಾಗುತ್ತಿಲ್ಲ. ಇದರಿಂದ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರ ನಡುವೆ ಕೆಲವರು ಗೊಂದಲ ಸೃಷ್ಟಿಸಿ, ಅಪಪ್ರಚಾರದಲ್ಲಿ ತೊಡಗಿದ್ದು ಈಗಾಗಲೇ ಸರ್ಕಾರದಿಂದ ಸ್ಪಷ್ಟ ಉತ್ತರ ನೀಡಲಾಗಿದೆ ಎಂದು ತಿಳಿಸಿದರು.

ನಂದಿ ಬೆಟ್ಟಕ್ಕೆ ರೋಪ್​ ವೇ ಚರ್ಚೆ:
ಈ ಹಿಂದೆ ಅನೇಕ ಬಾರಿ ನಂದಿ ಬೆಟ್ಟಕ್ಕೆ ರೋಪ್​ ವೇ ಅಳವಡಿಕೆಗೆ ಸಂಬಂಧಿಸಿದಂತೆ ಮಾತುಕತೆಗಳಾಗಿವೆ. ಆದರೆ, ಇದಕ್ಕೆ ಅನುಗುಣವಾಗಿ ಸಮರ್ಪಕವಾಗಿ ಕೆಲಸವಾಗಿಲ್ಲ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಾಧಕ ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಮತ್ತೆ ಇನ್ನೊಂದು ತಿಂಗಳಲ್ಲಿ ಗಿರಿಧಾಮಕ್ಕೆ ಭೇಟಿ ನೀಡಲಿದ್ದು, ತ್ವರಿತವಾಗಿ ಕಾಮಗಾರಿಗೆ ಚಾಲನೆ ಸಿಗಲಿದೆ. ಈ ನಿಟ್ಟಿನಲ್ಲಿ ಇಲ್ಲಿಂದ ಬೆಂಗಳೂರಿಗೆ ಹೋದ ತಕ್ಷಣ ರೋಪ್​ ವೇ ಯೋಜನೆಯ ಪ್ರಗತಿ ಪರಿಶೀಲನೆಯೇ ಪ್ರಮುಖ ಮೊದಲು ಕೆಲಸ ಎಂದು ಸಚಿವರು ತಿಳಿಸಿದರು.

ರಾಜ್ಯ ಸರ್ಕಾರವು ಪ್ರವಾಸೋದ್ಯಮದ ಅಭಿವೃದ್ಧಿಗೆ 300 ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಬಡ ಜನರಿಗೂ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಸಕಾರಾತ್ಮಕ ಬದಲಾವಣೆಗಳಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಎಚ್​.ಕೆ.ಪಾಟೀಲ್​, ಪ್ರವಾಸೋದ್ಯಮ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net