

ಕುಂದಾಪುರ: ಯಡಿಯೂರಪ್ಪ ನೇತೃತ್ವದ ಹಿಂದಿನ ಸರ್ಕಾರ ಜಾರಿಗೆ ತಂದ ಹಸಿರು ಕವಚ ಯೋಜನೆ ಫಲವಾಗಿ ಇಂದು ಕರಾವಳಿ ತೀರದಲ್ಲಿ ಕಾಂಡ್ಲಾ ಹಸಿರು ವನ ವೃದ್ಧಿಯಾಗಿದೆ. ಇದು ಕಡಲ್ಕೊರೆತ, ಚಂಡಮಾರುತ ತಡೆಗೆ, ಮೀನುಗಳ ಸಂತತಿ ಅಭಿವೃದ್ಧಿಗೆ ಸಹಕಾರಿ. ಕರಾವಳಿ ತೀರ ಹಸಿರು ಪ್ರವಾಸೋದ್ಯಮ ವಲಯವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಶನಿವಾರ ಕುಂದಾಪುರ ಚರ್ಚ್ ರಸ್ತೆ ಬಳಿ ಕಾಂಡ್ಲಾ ವನ ವೀಕ್ಷಣೆಗೆ ಆಗಮಿಸಿದ ಸಂದರ್ಭ ಕುಂದಾಪುರ ಅರಣ್ಯ ವಿಭಾಗದ ಕಾಂಡ್ಲಾ ಅರಣ್ಯ ಕಿರು ಪರಿಚಯ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಸಿರು ಕವಚ ಯೋಜನೆ ಫಲವಾಗಿ ಶೇ.13ರಷ್ಟಿದ್ದ ಗ್ರೀನ್ ಪವರ್ ಶೇ.23ಕ್ಕೆ ಏರಿಯಾಗಿದೆ. ಅದನ್ನು ಶೇ.33ಕ್ಕೆ ಏರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಪ್ರಾಕೃತಿಕ ವಿಕೋಪ ತಡೆ, ಮೀನುಗಳ ಸಂತಾನೋತ್ಪತ್ತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಾಂಡ್ಲಾವನ ಬೆಳೆಸುವ ಮತ್ತು ರಕ್ಷಣೆ ಕುರಿತು ಯೋಜನೆ ಹಾಕಿಕೊಳ್ಳಲಾಗಿದೆ. ಕುಂದಾಪುರ ಕಾಣೆ ಮೀನು ಅಭಿವೃದ್ಧಿಗೆ ಕಾಂಡ್ಲಾ ಅವಶ್ಯವಾಗಿದ್ದು, ಹಿನ್ನೀರು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಂಡ್ಲಾ ಕಾಡು ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.
ಕಾಂಡ್ಲಾ ವನ ಅಭಿವೃದ್ಧಿ: ಕರೊನಾ ಸಂಕಷ್ಟ ಕಾಲದಲ್ಲಿ ಆಮ್ಲಜನಕದ ಕೊರತೆಯಾಗಿದ್ದು, ಪ್ರಾಕೃತಿಕವಾಗಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಕಾಂಡ್ಲಾ ವನ ಹೆಚ್ಚು ಪರಿಣಾಮಕಾರಿ. ಕಾಂಡ್ಲಾವನ ಹಸಿರು ವಲಯಾವಾಗಿ ಅಭಿವೃದ್ಧಿಪಡಿಸಿ ಅದರ ವಿಡಿಯೋ ಚಿತ್ರಣದ ಮೂಲಕ ಹೆಚ್ಚು ಪ್ರಚಾರ ಮಾಡುವುದರಿಂದ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ಕಾಂಡ್ಲಾ ಪ್ರವಾಸೋದ್ಯಮದಿಂದ ಬಂದ ಆದಾಯ ಬಳಸಿ ಮತ್ತಷ್ಟು ಕಾಂಡ್ಲಾ ವನ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಸಚಿವ ಲಿಂಬಾವಳಿ ತಿಳಿಸಿದರು.
ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪುರಸಭೆ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಬೈಂದೂರು ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯರಾದ ಸಂತೋಷ್ ಶೆಟ್ಟಿ, ಶ್ವೇತಾ, ಸಂತೋಷ್, ಕಮಲಾ, ಮಾಜಿ ಪುರಸಭೆ ಸದಸ್ಯ ಪುಷ್ಪಾ ಶೇಟ್, ಪ್ರಕಾಶ್ ಖಾರ್ವಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸುರೇಶ್ ಶೆಟ್ಟಿ, ಮೀನುಗಾರ ಪ್ರಕೋಷ್ಠ ಅಧ್ಯಕ್ಷ ಸದಾನಂದ ಬಳ್ಕೂರು ಮುಂತಾದವರು ಇದ್ದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಆಕ್ಷೇಪಣೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಕಡಲಾಮೆ ಸಂರಕ್ಷಣೆ ಕೇಂದ್ರ ಹಾಗೂ ರಾಜಾಡಿ ಕಾಂಡ್ಲಾವನಕ್ಕೆ ನೀರಿಲ್ಲದ ಬಗ್ಗೆ ಈಗಷ್ಟೇ ಗಮನಕ್ಕೆ ಬಂದಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು.
ಅರವಿಂದ ಲಿಂಬಾವಳಿ, ಅರಣ್ಯ ಇಲಾಖೆ ಸಚಿವ
ಕಾಂಡ್ಲಾ ಸೊಬಗಿಗೆ ಮನಸೋತ ಲಿಂಬಾವಳಿ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದು ನೇರವಾಗಿ ಕುಂದಾಪುರ ಚರ್ಚ್ ರಸ್ತೆ ಕೋಡಿ ಸೇತುವೆ ಬಳಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ತಾಲೂಕು ಆಡಳಿತದ ಪರವಾಗಿ ಎಸಿ.ಕೆ.ರಾಜು, ಪುರಸಭೆ ಪರವಾಗಿ ವೀಣಾ ಭಾಸ್ಕರ ಮೆಂಡನ್, ಅರಣ್ಯ ಇಲಾಖೆಯಿಂದ ಆಶಿಶ್ ರೆಡ್ಡಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಕೋಡಿ ನದಿ ಪಾತ್ರದಲ್ಲಿ ಬೆಳೆದ ಕಾಂಡ್ಲಾ ವನದ ಬಗ್ಗೆ ಮಾಹಿತಿ ಪಡೆದು, ಬೋಟ್ ಮೂಲಕ ವೀಕ್ಷಣೆಗೆ ತೆರಳಿದರು. ಸಚಿವರ ಜತೆ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ಅರಣ್ಯ ಅಧಿಕಾರಿಗಳು ಸಾಥ್ ನೀಡಿದರು.