ಧ್ವನಿ ಬೆಳಕು ಕಾರ್ಯಕ್ರಮಕ್ಕೆ ಪ್ರಸ್ತಾವನೆ ಕಳಿಸಿ

Tourism Meeting
Published on

 ಕಾರವಾರ:ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಆಕರ್ಷಿಸುವ ನಿಟ್ಟಿನಲ್ಲಿ ಐತಿಹಾಸಿಕ ಸ್ಥಳಗಳಾದ ಬನವಾಸಿ ಮತ್ತು ಮಿರ್ಜಾನ್ ಕೋಟೆಯಲ್ಲಿ ಧ್ವನಿ ಬೆಳಕು ಕಾರ್ಯಕ್ರಮವನ್ನು ಆಯೋಜಿಸುವ ಕುರಿತಂತೆ ಪ್ರಸ್ತಾವನೆಯನ್ನು ತಯಾರಿಸಿ,ಪ್ರಾಚ್ಯ ವಸ್ತು ಇಲಾಖೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಕಾರ್ಯಕ್ರಮ ಆಯೋಜನೆಗೆ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರವಾಸೋದ್ಯಮವನ್ನು ಆಕರ್ಷಿಸುವ ಜೊತೆಯಲ್ಲಿ ಪ್ರವಾಸಿ ಸ್ಥಳಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ಬೀಚ್ ಗಳಲ್ಲಿ ಸುರಕ್ಷತೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು,ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರಿಗೆ ಲಗೇಜ್ ಮತ್ತು ಲಾಕರ್ ವ್ಯವಸ್ಥೆ ಒದಗಿಸಲು, ಸ್ನಾನಗೃಹಗಳ ನಿರ್ಮಾಣ ಮತ್ತು ಹೆಚ್ಚುವರಿ ಲೈಫ್ ಗಾರ್ಡ್ಗಳ ನೇಮಕ ಮಾಡುವಂತೆ ಮತ್ತು ತುರ್ತು ಸಂದರ್ಭದಲ್ಲಿ ನೆರವಾಗುವಂತೆ ಪ್ರಥಮ ಚಿಕಿತ್ಸಾ ಕೇಂದ್ರ ಮತ್ತು ನುರಿತ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದರು.

ಹೊನ್ನಾವರ ತಾಲೂಕಿನ ಶರಾವತಿಯಲ್ಲಿ ಬೋಟಿಂಗ್ ಆರಂಭಿಸಲು ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಬಂದರು ಇಲಾಖೆಯಿಂದ ನಿರಾಕ್ಷೇಪಣ ಪತ್ರ ನೀಡುವಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಬಂದರು ಇಲಾಖೆಗೆ ಪ್ರಸ್ತುತ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಒಂದು ವಾರದ ಒಳಗೆ ಇತ್ಯರ್ಥಪಡಿಸಿ ವರದಿ ನೀಡುವಂತೆ ಸೂಚಿಸಿ, ಬೋಟಿಂಗ್ ಸಂದರ್ಭದಲ್ಲಿ ಪ್ರವಾಸಿಗರಿಗೆ ಕಡ್ಡಾಯವಾಗಿ ಲೈಫ್ ಜಾಕೆಟ್ ಗಳನ್ನು ಒದಗಿಸಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಮತ್ತು ನಿಯಮಬದ್ದವಾಗಿರುವ ಮತ್ತು ಸೂಕ್ತ ದಾಖಲೆಗಳನ್ನು ಸಲ್ಲಿಸಿರುವ ಅರ್ಜಿಗಳನ್ನು ವಿಲೇ ಮಾಡಿ ಬೋಟಿಂಗ್ ನಡೆಸಲು ಅನುಮತಿ ನೀಡಬೇಕು ಎಂದರು.

ಕಾಸರಕೋಡ,ಅಪ್ಸರಕೊಂಡ,ಧಾರೇಶ್ವರ ಕಡಲತೀರದಲ್ಲಿ ಜಲಸಾಹಸ ಕ್ರೀಡೆ ನಡೆಸಲು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತಂತೆ ಪೊಲೀಸ್, ಅರಣ್ಯ ಮತ್ತು ಸಂಬಂದಪಟ್ಟ ಇಲಾಖೆಗಳಿಂದ ನಿರಕ್ಷೇಪಣಾ ಪತ್ರ ಪಡೆದು ಅನುಮತಿ ನೀಡುವ ¨ಗ್ಗೆ ಕ್ರಮ ಕೈಗೊಳ್ಳಬೇಕು  ಹಾಗೂ ಅಪ್ಸರಕೊಂಡದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಅನುಮತಿ ನೀಡುವ ಮುನ್ನ ಸುರಕ್ಷತೆಯ ಬಗ್ಗೆ ಪರಿಶೀಲಿಸಿ ಎಂದು ನಿರ್ದೇಶಿಸಿದರು.

ಜಿಲ್ಲೆಯಾದ್ಯಂತ ಪ್ರವಾಸಿ ಸ್ಥಳಗಳಲ್ಲಿ ಸೈನೇಜ್ ಬೋರ್ಡ್ಗಳನ್ನು ಅಳವಡಿಸುವಂತೆ ತಿಳಿಸಿದ ಅವರು, ಕಾರವಾರದ ಕಡಲತೀರದಲ್ಲಿರುವ ಯುದ್ದ ನೌಕೆ ಮತ್ತು ಯುದ್ದ ವಿಮಾನದ ಮಾಹಿತಿಯನ್ನು ಒಳಗೊಂಡ ಕ್ಯೂರ್ ಆರ್ ಕೋಡ್ ರಚಿಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಉಪ ವಿಭಾಗಾಧಿಕಾರಿ ಶ್ರವಣಕುಮಾರ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಝೂಫಿಶಾನ್ ಹಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ , ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಮಂಗಳಗೌರಿ ಭಟ್ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net