

ಮಂಗಳೂರು: ಬಂಡವಾಳ ಹೂಡಿಕೆದಾರರ ಸಮಾವೇಶ ಮಾದರಿಯಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶೀಘ್ರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ. ಸಚಿವರೊಂದಿಗೆ ಚರ್ಚೆ ನಡೆಸಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖಾ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ವತಿಯಿಂದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮಂಗಳೂರಿನಲ್ಲಿ ಶುಕ್ರವಾರ ಆಯೋಜಿಸಲಾದ ದ.ಕ ಉಡುಪಿ ಜಿಲ್ಲಾ ಟ್ರಾವೆಲ್, ಟೂರಿಸಂ ಮತ್ತು ಹಾಸ್ಪಿಟಾಲಿಟಿ ಪಾಲುದಾರರರೊಂದಿಗೆ ಸಂವಾದ ‘ಕನೆಕ್ಟ್-2021’ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಜಾರಿಗೆ ಬಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2020-25 ಮೂಲಕ 5 ಸಾವಿರ ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿದ್ದು, 10 ಲಕ್ಷ ಮಂದಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ದೊರೆಯಲಿದೆ. 350ಕ್ಕೂ ಹೆಚ್ಚು ಪ್ರವಾಸೋದ್ಯಮ ಯೋಜನೆಗಳಿಗೆ ಅನುಕೂಲವಾಗಲಿದೆ. ಆಗಸ್ಟ್ 27-29ರವರೆಗೆ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ(ಕೈಟ್) ಆಯೋಜಿಸಲಾಗಿದೆ. ಇದರಲ್ಲಿ ಎಲ್ಲ ಜಿಲ್ಲೆಗಳ ಪಾಲ್ಗೊಳ್ಳುವಿಕೆ ಅವಶ್ಯ ಎಂದರು.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದೆ. ನದಿ, ಸಮುದ್ರದ, ಹಿನ್ನೀರು, ಸರೋವರಗಳನ್ನು ಉಪಯೋಗಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬಹುದಾಗಿದೆ. ಸೀಪ್ಲೇನ್, ಹೆಲಿ ಟೂರಿಸಂ, ಬೋಟ್‌ಹೌಸ್ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದಾಗಿದೆ.ಉಭಯ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕುಮಾರ್ ಪುಷ್ಕರ, ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಕಾರ್ಯದರ್ಶಿ ಮನು ಉಪಸ್ಥಿತರಿದ್ದರು.
ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಜಂಟಿ ಕಾರ್ಯದರ್ಶಿ ರವೀಂದ್ರ ಸ್ವಾಗತಿಸಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಬನವಾಸಿ ವಂದಿಸಿದರು. ಮಂಜುನಾಥ್ ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.
ದ.ಕ ಪ್ರವಾಸೋದ್ಯಮಕ್ಕೆ ಲೋಗೊ: ಜಿಲ್ಲಾಡಳಿತ ವತಿಯಿಂದ ರಚಿಸಲಾದ ನೂತನ ದ.ಕ ಪ್ರವಾಸೋದ್ಯಮ ಲಾಂಛನವನ್ನು ಪಂಕಜ್ ಕುಮಾರ್ ಪಾಂಡೆ ಅನಾವರಣಗೊಳಿಸಿದರು. ‘ದಕ್ಷಿಣ ಕನ್ನಡ-ಕಿಂಗ್ಡಮ್ ಆಫ್ ಡಿಲೈಟ್’ ಟ್ಯಾಗ್‌ಲೈನ್ ಹೊಂದಿರುವ ಲೋಗೊ, ನದಿ, ಸಮುದ್ರ, ದೋಣಿ, ತೆಂಕುತಿಟ್ಟು ಯಕ್ಷಗಾನದ ಕಿರೀಟ ಮತ್ತು ಕಂಬಳ ಕೋಣದ ಕೊಂಬು ಒಳಗೊಂಡಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾಫಿ ಟೇಬಲ್ ಬುಕ್ ಮತ್ತು ಟೀಸರ್ ವಿಡಿಯೋಗಳ ನಿರ್ಮಾಣವೂ ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಉಡುಪಿ ಪ್ರವಾಸೋದ್ಯಮ ಕರಡು ಸಿದ್ಧ: ಮುಂದಿನ ಹತ್ತು ವರ್ಷದ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಗುರುತಿಸಲಾಗಿರುವ 104 ಪ್ರವಾಸಿ ಸ್ಥಳಗಳ ಸರ್ವೇ ನಡೆಸಿ ಕರಡು ಯೋಜನೆ ಸಿದ್ಧಪಡಿಸಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ವಿಷನ್ ಪ್ಲಾೃನ್ ಸಲ್ಲಿಸಲಾಗುವುದು. ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಸ್ಥಳೀಯವಾಗಿಯೇ ಆದಾಯ ಪಡೆಯುವ ಉದ್ದೇಶ ಹೊಂದಲಾಗಿದೆ. ಪಡುಬಿದ್ರಿ ಬ್ಲೂಫ್ಲಾೃಗ್ ಬೀಚ್ ಕುರಿತಂತೆ ಕೇಂದ್ರ ಸರ್ಕಾರ ಜತೆಗಿನ ಒಂದು ವರ್ಷದ ಒಪ್ಪಂದ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ರಾಜ್ಯ ಸರ್ಕಾರ 1 ವರ್ಷಕ್ಕೆ ನೆರವು ನೀಡಿದರೆ, ನಂತರ ಜಿಲ್ಲಾಡಳಿತವೇ ನಿರ್ವಹಿಸಲಿದೆ. ಬೋಟ್‌ಹೌಸ್‌ಗೆ ಶೇ.50ರಷ್ಟು ಪ್ರಾರಂಭಿಕ ಸಬ್ಸಿಡಿ ನೀಡಿದರೆ ಹೆಚ್ಚಿನ ಬೋಟ್‌ಹೌಸ್ ನಿರ್ಮಾಣ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಗದೀಶ ಅಭಿಪ್ರಾಯಪಟ್ಟರು.
6 ತಿಂಗಳಲ್ಲಿ ಸೀಪ್ಲೇನ್-ಹೆಲಿಟೂರಿಸಂ: ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಇನ್ನು ಆರು ತಿಂಗಳಲ್ಲಿ ನಾವು ಸೀಪ್ಲೇನ್-ಹೆಲಿಟೂರಿಸಂ ಮೂಲಕ ಪ್ರವಾಸಿಗರನ್ನು ಸೆಳೆಯಲಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಭೆಗಳು ನಡೆದಿದೆ. ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಪಾಲುದಾರರ ಸಭೆ ನಡೆಸಲು ಉದ್ದೇಶಿಸಲಾಗಿದೆ. ಬೀಚ್ ಒತ್ತುವರಿ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಬೀಚ್‌ಗಳ ಸರ್ವೇ ಕಾರ್ಯವೂ ಪ್ರಗತಿಯಲ್ಲಿದೆ. ಜಿಲ್ಲಾ ಪ್ರವಾಸೋದ್ಯಮ ಡೈರೆಕ್ಟರಿ ರಚಿಸುವ ಉದ್ದೇಶವಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ವಿವರಿಸಿದರು.