

ಮಡಿಕೇರಿ: ಕೊಡಗು ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಪ್ರಸಿದ್ಧ ದೇವಾಲಯಗಳು, ಪವಿತ್ರ ಸ್ಥಳಗಳು, ಹೋಟೆಲ್, ಹೋಂಸ್ಟೇ, ರೆಸಾರ್ಟ್, ಜಲಾಶಯ, ಜಲಪಾತ, ಪ್ರೇಕ್ಷಣೀಯ ಸ್ಥಳಗಳು ಹೀಗೆ ವಿವಿಧ ಪ್ರವಾಸಿ ಅಂಶಗಳನ್ನು ಒಳಗೊಂಡ ವೆಬ್‌ಸೈಟ್‌ನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಕಾರದಲ್ಲಿ ನಗರದ ಹೊರವಲಯದ ಆಕ್ಸಿರಿಚ್ ಹೋಟೆಲ್‌ನಲ್ಲಿ ಸೋಮವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯ ಪವಿತ್ರ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಡಿಸೆಂಬರ್‌ನೊಳಗೆ ವೆಬ್‌ಸೈಟ್‌ಗೆ ಚಾಲನೆ ನೀಡಲಾಗುವುದು. ಕೊಡಗು ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಸರಿಯಾದ ಮಾಹಿತಿ ನೀಡಿದಲ್ಲಿ ಅವರು ಮತ್ತೊಬ್ಬರಿಗೆ ತಿಳಿಸುತ್ತಾರೆ. ಈ ಬಗ್ಗೆ ಅಂತರ್ಜಾಲ ಮೂಲಕ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕೊಡಗು ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಹಾಗೂ ಪರಿಸರ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಪ್ರವಾಸಿಗರಲ್ಲಿ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಜಿಲ್ಲೆಯ ಎಲ್ಲೆಡೆ ಪರಿಸರ ಪ್ರವಾಸೋದ್ಯಮ ನಿರ್ಮಾಣ ಮಾಡಬೇಕು. ಪ್ಲಾಸ್ಟಿಕ್ ಬಳಸದಂತೆ ಸಲಹೆ ಮಾಡಬೇಕು. ಜಿಲ್ಲೆಯ ಪವಿತ್ರ ಸ್ಥಳಗಳು ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇರಬೇಕು. ಊಟಿ ಹಾಗೂ ತಿರುಪತಿಯಲ್ಲಿ ಪ್ರವಾಸಿ ಹಾಗೂ ಪವಿತ್ರ ಸ್ಥಳದಲ್ಲಿನ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕು. ಈ ಸಂಬಂಧ ಆಗಾಗ ಶಿಬಿರ ಏರ್ಪಡಿಸುವ ಮೂಲಕ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಸಮತೋಲಿತ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು. ಪ್ರವಾಸಿಗರಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲೆಗೆ ಪ್ರವಾಸಿಗರು ಯಾವ ತಿಂಗಳಲ್ಲಿ ಭೇಟಿ ನೀಡಬೇಕು ಎಂಬ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ಇರಬೇಕು. ಪ್ರವಾಸೋದ್ಯಮ ನೀತಿಯನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಸಲಹೆ ಮಾಡಿದರು.
ಕೊಡಗು ಜಿಲ್ಲೆಯ ವಿಶೇಷತೆ ಬಗ್ಗೆ ಕಾಫಿ ಟೇಬಲ್ ಬುಕ್ ಹೊರ ತರುವಂತಾಗಬೇಕು. ಇಲ್ಲಿನ ನದಿ, ಜಲಾಶಯ, ದುಬಾರೆ ಆನೆ ಶಿಬಿರ, ರಿವರ್ ರ‌್ಯಾಪ್ಟಿಂಗ್ ಹೀಗೆ ಹಲವು ವಿಶೇಷತೆ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ದೊರೆಯುವಂತಾಗಬೇಕು. ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರವಾಸಿ ಮಾರ್ಗದರ್ಶಿ ಪುಸ್ತಕ ಅಗತ್ಯ ಎಂದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಗೆ ೧ ಲಕ್ಷ ಜನರು ಭೇಟಿ ನೀಡುತ್ತಾರೆ. ಆದ್ದರಿಂದ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಸಂಬಂಧ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ಮಾಡಿದರು.
ತಲಕಾವೇರಿ, ಭಾಗಮಂಡಲ ಕ್ಷೇತ್ರವನ್ನು ಪವಿತ್ರ ಸ್ಥಳವೆಂದು ಪ್ರಕಟಿಸಬೇಕು. ಆ ನಿಟ್ಟಿನಲ್ಲಿ ಪ್ರವಾಸಿಗರಿಗೆ ಮಾಹಿತಿ ದೊರೆಯಬೇಕು. ಪ್ರವಾಸಿಗರ ಜೊತೆ ಸೌಜನ್ಯದಿಂದ ನಡೆದುಕೊಂಡಲ್ಲಿ ಅವರು ಮತ್ತೊಬ್ಬರಿಗೆ ಕೊಡಗಿನ ಮಹತ್ವದ ಬಗ್ಗೆ ಹೇಳುತ್ತಾರೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ನಾಗೇಂದ್ರ ಪ್ರಸಾದ್ ಅವರು ಕೋರಿದರು.
ಪವಿತ್ರ ಹಾಗೂ ಪ್ರವಾಸಿ ಸ್ಥಳಗಳಲ್ಲಿ ರಕ್ಷಕರನ್ನು ನಿಯೋಜಿಸಬೇಕು. ೧.೨೫ ಲಕ್ಷ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರವಾಸೋದ್ಯಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ೧.೨೫ ಲಕ್ಷ ಜನರು ಪ್ರವಾಸೋದ್ಯಮವನ್ನು ನಂಬಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ. ಜೊತೆಗೆ ಉದ್ಯೋಗವು ಸಹ ದೊರೆಯಲಿದೆ. ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, ಕೊಡಗು ಜಿಲ್ಲೆಗೆ ಪ್ರತಿ ವರ್ಷ ಸುಮಾರು ೪೭ ರಿಂದ ೫೦ ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಿದೆ. ಕೊಡಗು ಜಿಲ್ಲೆಯ ಕಲೆ, ಪರಂಪರೆ ಸಾಂಪ್ರಾದಾಯಗಳ ಜೊತೆ ಇಲ್ಲಿನ ಅತಿಥ್ಯಕ್ಕೆ ಪ್ರವಾಸಿಗರು ಹೆಚ್ಚು ಆಕರ್ಷಿತಾರಾಗುತ್ತಾರೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರೂ.೨೮೧೩.೯ ಲಕ್ಷಗಳ ಅನುದಾನದಲ್ಲಿ ವಿವಿಧ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯ ನಿರ್ಮಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಅವರು ಸುಸ್ಥಿರ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಿದರು. ಶೂನ್ಯ ತ್ಯಾಜ್ಯ ಪ್ರವಾಸ ಜಾಗೃತಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ಹೋಂಸ್ಟೇ ಪರವಾನಗಿ ಪತ್ರವನ್ನು ಜಿಲ್ಲಾಧಿಕಾರಿ ಅವರು ವಿತರಿಸಿದರು. ಸ್ವಚ್ಛತಾ ಗ್ರೀನ್ ಲೀಪ್ ರೇಟಿಂಗ್ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಮೈಸೂರಿನ ಫುಡ್ ಕ್ರಾಪ್ಟ್ ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಕಣ್ಣನ್, ಗ್ರೀನ್ ಪಾರ್ಕ್ ಸಂಸ್ಥೆಯ ಎಚ್.ಆರ್.ಜಯರಾಮ್, ಟೂರ್ಸ್ ಮತ್ತು ಟ್ರಾವೆಲ್ ಅಸೋಷಿಯೇಷನ್‌ನ ಅಧ್ಯಕ್ಷ ಕುಪ್ಪಂಡ ವಸಂತ, ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಅಂಬೆಕಲ್ಲು ನವೀನ್, ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಪ್ರಮುಖರಾದ ಜಿ.ಚಿದ್ವಿಲಾಸ್, ಬಿ.ಜಿ.ಅನಂತಶಯನ, ಅನಿಲ್.ಎಚ್.ಟಿ., ಟ್ರಾವೆಲ್ ಅಸೋಷಿಯೇಷನ್ ಸದಸ್ಯರು ಇತರರು ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ೪ ಸಾವಿರ ಹೋಂಸ್ಟೇ
ಜಿಲ್ಲೆಯಲ್ಲಿ ಸುಮಾರು ೪ ಸಾವಿರ ಹೋಂ-ಸ್ಟೇಗಳಿದ್ದು, ಇಲ್ಲಿಯವರೆಗೆ ೨೦೧೦ ಹೋಂ-ಸ್ಟೇಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು ೧೫೦ ಹೋಟೆಲ್/ ರೆಸಾರ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ೫೩ ಹೋಟೆಲ್/ ರೆಸ್ಟೋರೆಂಟ್/ ರೆಸಾರ್ಟ್‌ಗಳು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ನಲ್ಲಿ ನೋಂದಾಯಿಸಿ ಪ್ರಮಾಣ ಪತ್ರವನ್ನು ಪಡೆದಿದ್ದಾರೆ ಎಂದರು. ಕುಶಾಲನಗರ ತಾಲೂಕು ದುಬಾರೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಬರ್ಪುಹೊಳೆ ಪ್ರವಾಸಿ ತಾಣಗಳಲ್ಲಿ ರಿವರ್ ರ‌್ಯಾಫ್ಟಿಂಗ್ ನಡೆಸಲು ಪರವಾನಿಗೆ ನೀಡಲಾಗಿರುತ್ತದೆ.