

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣಗಳಿವೆ. ಅವುಗಳ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸಿ ತಾಣಗಳ ಪೈಕಿ ಕೆಲವು ಸ್ಥಳಗಳು ಕೇಂದ್ರ ಹಾಗೂ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಗೆ ಒಳಪಡುತ್ತದೆ. ಇಲ್ಲಿ ಕೆಲಸ ನಡೆಸಲು ಅವರ ಅನುಮತಿ ಪಡೆಯಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಎಲ್ಲ ಇಲಾಖೆಗಳು ಒಟ್ಟಿಗೆ ಸೇರಿ ಚರ್ಚಿಸಿ ಯೋಜನೆ ರೂಪಿಸಬೇಕಿರುತ್ತದೆ ಎಂದರು.
ಇದೇ ವೇಳೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಕೆಮಿಕಲ್ ವಾಷ್, ಗುಂಬಜ್, ದರಿಯಾ ದೌಲತ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಾಹನ ನಿಲುಗಡೆ, ಸ್ವಚ್ಛತೆ, ಇನ್ನಿತರೆ ಮೂಲ ಸೌಕರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ನಂದೀಶ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಇತರರಿದ್ದರು.