ಕರಾವಳಿ ಸಂಸ್ಕೃತಿ ಪ್ರತಿಬಿಂಬಿಸುವ ಮ್ಯೂಸಿಯಂ -ಸ್ಪೀಕರ್ ಯು.ಟಿ. ಖಾದರ್ ಆಶಯ

mng-27sep-tourism
Published on



ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ, ನಿರೀಕ್ಷಿತ ಪ್ರಗತಿಯಾಗಿಲ್ಲ. ಪ್ರವಾಸಿಗರನ್ನು ಆಕರ್ಷಿಸಲು ಕರಾವಳಿಯ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಮ್ಯೂಸಿಯಂ ರಚನೆ ಅವಶ್ಯವಾಗಿದ್ದು , ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಗಮನ ಹರಿಸಬೇಕಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ದ.ಕ.ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ಪ್ರವಾಸೋದ್ಯಮ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ‘ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನೀಡುವ ಸಲಹೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಒಳ್ಳೆಯ ಉದ್ದೇಶಕ್ಕಾಗಿ ಸಿಆರ್‌ಝಡ್ ಜಾರಿಯಾಗಿತ್ತು. ಆದರೆ ಅದರಿಂದ ಈಗ ಮೀನುಗಾರರಿಗೆ ಸಂಕಷ್ಟ ಒದಗಿದೆ. ಮೀನುಗಾರರಿಗೆ ಹಕ್ಕುಪತ್ರ ನೀಡುವುದರ ಜತೆ, ಆ ಜಾಗದಲ್ಲಿ ಹೋಮ್ ಸ್ಟೇ ನಿರ್ಮಿಸಲು ಅವಕಾಶ ನೀಡಬಹುದು .ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಬೇಕು. ಸಲಹೆಗಳು ಅನುಷ್ಠಾನ ಆಗುವುದು ಮುಖ್ಯ. ಪ್ರವಾಸಿಗರು ಹೆಚ್ಚೆಚ್ಚು ಬರುವಂತಾಗಲು ಇಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣ ಮಾಡುವ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇವಲ 20- 25 ಕೋಟಿ ರೂ.ಅನುದಾನ ಇದೆ.
ಇದರಿಂದ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಆದರೆ ಸರ್ಕಾರದ ವೆಚ್ಚ ಇಲ್ಲದೆ ವಿವಿಧ ಉದ್ಯಮಗಳು, ಸಂಸ್ಥೆಗಳ ಸಹಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು. ಈ ನಿಟ್ಟಿನಲ್ಲಿ ಹೊಸ ರೀತಿಯ ಯೋಚನೆ, ಯೋಜನೆ ಅಗತ್ಯವಿದೆ ಎಂದರು.
ಮಂಗಳೂರಲ್ಲಿ ಕಡಲು- ನದಿಗಳ ಸಂಗಮದ ಅಪರೂಪದ ತಾಣಗಳಿವೆ. ಪ್ರವಾಸಿಗರು ಕರಾವಳಿಗೆ ಬಂದರೆ ಇಲ್ಲಿನ ಪ್ರವಾಸಿ ತಾಣ, ತಿಂಡಿ, ತಿನಿಸುಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಸದ್ಯಕ್ಕೆ ಇಲ್ಲ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸಹಿತ ನಗರದ ಆಯ್ದ ಸ್ಥಳಗಳಲ್ಲಿ ಈ ಬಗ್ಗೆ ಸರಿಯಾದ ಮಾಹಿತಿ ಸುಲಭದಿಂದ ಸಿಗುವ ವ್ಯವಸ್ಥೆ ಆಗಬೇಕಿದೆ . ಹಳೆ ಬಂದರಿನ 2 ದ್ವೀಪಗಳಲ್ಲಿ ಪ್ರಯಾಣಿಕರ ಜಟ್ಟಿ ಮಂಜೂರಾಗಿದೆ .ರಿವರ್ ಫ್ರಂಟ್ ಪ್ರದೇಶಗಳಲ್ಲಿ ಬರ್ಡ್ ವಾಚಿಂಗ್ ಏರಿಯಾ, ಸೈಕಲ್ ಟ್ರಾೃಕ್ ಹೀಗೆ ವಿಭಿನ್ನ ಪರಿಕಲ್ಪನೆಯ ಯೋಜನೆಗಳ ಮೂಲಕ ವಿಶಿಷ್ಟವಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಕೆಲಸಗಳನ್ನು ಮಾಡಬಹುದು ಎಂದು ಶಾಸಕ ಕಾಮತ್ ಸಲಹೆ ನೀಡಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಮಂಗಳಾ ಕಾರ್ನಿಶ್ ಯೋಜನೆಗೆ ಮಾಜಿ ಶಾಸಕ ಯೋಗೀಶ್ ಭಟ್ ಪ್ರಯತ್ನ ಪಟ್ಟಿದ್ದರು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಉಪಸ್ಥಿತರಿದ್ದರು. ಬಳಿಕ ವಿವಿಧ ಸಂಘ ಸಂಸ್ಥೆಗಳಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಸಲಹೆಗಳನ್ನು ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net