

ಮಡಿಕೇರಿ:
ಮಲೆನಾಡಿನ ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಕೊಡಗು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸಿಗರು ಭೇಟಿ ನೀಡಬಹುದಾಗ ಪ್ರವಾಸಿ ಆಕರ್ಷಣೆಗಳು ಇಲ್ಲಿವೆ. ಇನ್ನೂ ಬೆಳಕಿಗೆ ಬಾರದ ಪ್ರವಾಸಿ ತಾಣಗಳು ಕೂಡ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದೆ. ಸರ್ಕಾರವೂ ಕೊಡಗಿನ ಕಡೆಗೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಯೋಜನೆಗಳನ್ನು ರೂಪಿಸುತ್ತಿದೆ. ಇತ್ತೀಚಿಗೆ ಪ್ರಕಟವಾದ ನೂತನ ಪ್ರವಾಸಿ ನೀತಿಯೂ ಇದಕ್ಕೆ ಒತ್ತು ಕೊಟ್ಟಿದೆ.
ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಮತ್ತು ಪ್ರವಾಸಿ ತಾಣಗಳಲ್ಲಿ ಆಕರ್ಷಣೆಗಳನ್ನು ಹೆಚ್ಚಿಸಲು ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಆಸಕ್ತಿ ತೋರಿಸಿದೆ. ಈಗಾಗಲೇ ಮಡಿಕೇರಿ ರಾಜಾಸೀಟ್, ದುಬಾರೆ ಸಾಕಾನೆ ಶಿಬಿರ, ಹಾರಂಗಿ ಸಾಕಾನೆ ಶಿಬಿರದಲ್ಲಿ ಇಂಥ ಪ್ರಯೋಗಗಳು ನಡೆದಿದೆ. ಒಂದು ರೀತಿಯಲ್ಲಿ ಇದು ಉತ್ತಮ ಯೋಜನೆ ಎಂದೇ ಬಿಂಬಿಸಲಾಗುತ್ತಿದ್ದರೂ ಇದರ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಪಿಪಿಪಿ ಮಾದರಿಯಿಂದ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳು ಉತ್ತಮ ಆಗುತ್ತದೆ. ಪ್ರವಾಸಿ ತಾಣಗಳ ಆಕರ್ಷಣೆ ಹೆಚ್ಚುತ್ತದೆ. ಅಂತಾರಾಷ್ಟಿçÃಯ ದರ್ಜೆಯ ಸವಲತ್ತುಗಳು ಸಿಗುವುದು ನಿಜವಾದರೂ ಸಾಮಾನ್ಯ ಪ್ರವಾಸಿಗರಿಗೆ ಇವೆಲ್ಲಾ ಸುಲಭವಾಗಿ ಲಭ್ಯ ಆಗುವುದಿಲ್ಲ ಎನ್ನುವ ಆರೋಪಗಳಿವೆ. ಪ್ರವಾಸೋದ್ಯಮದ ಆದಾಯ ಖಾಸಗಿಯವರ ಪಾಲಾಗುವ ಆತಂಕಗಳೂ ಇವೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗು ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸಲು ಖಾಸಗಿಯವರಿಗೆ ನೀಡುವುದು ಒಳ್ಳೆಯದು. ಆದರೆ ದುಬಾರಿ ಮಾಡಿ ನಂತರ ಪ್ರವಾಸಿಗರು ಕಡಿಮೆಯಾಗದಿದ್ದರೆ ಸಾಕು. ಒಮ್ಮೆ ದುಬಾರಿ ಎಂದು ಪ್ರಚಾರವಾದರೆ ಮತ್ತೆ ಆ ಭಾಗಕ್ಕೆ ಯಾರೂ ಹೋಗುವುದಿಲ್ಲ. ಈಗಾಗಲೇ ಕೆಲವು ಖಾಸಗಿಯವರು ನಿರ್ವಹಣೆ ಮಾಡುತ್ತಿರುವ ಪ್ರವಾಸಿತಾಣಗಳಿಗೆ ತೆರಳಲು ನೂರು ಬಾರಿ ಆಲೋಚಿಸಬೇಕಿದೆ. ಮೂಲಸೌಕರ್ಯಗಳೇ ಇಲ್ಲದಿದ್ದರೂ ಹಣ ಮಾತ್ರ ಕಡಿಮೆ ಇಲ್ಲ. ಹಾಗಾಗಿ ಹೊಸ ಯೋಜನೆ ರೂಪಿಸುವಾಗ ಸಾರ್ವಜನಿಕರ ಸಲಹೆ ಪಡೆದು ಯೋಜನೆ ರೂಪಿಸಲಿ.
ಬಿ.ಎಸ್. ಗಿರೀಶ್, ಕಾಫಿ ಬೆಳೆಗಾರ, ಬೆಟ್ಟದಳ್ಳಿ, ಶನಿವಾರಸಂತೆ
ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡಗು ಕೊಡ ಉತ್ತಮ ಸ್ಥಾನದಲ್ಲಿದೆ. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವ (ಪಿಪಿಪಿ) ಪಡೆದುಕೊಂಡರೆ ಹೆಚ್ಚು ಪ್ರವಾಸಿಗರು ಬರುವ ಜಾಗಕ್ಕೆ ಶುಲ್ಕ ಜಾಸ್ತಿಯಾಗಿ ಆ ಜಾಗಕ್ಕೆ ಹೆಚ್ಚು ಪ್ರವಾಸಿಗರು ಭೇಟಿ ನೀಡುವುದಿಲ್ಲ.
ಭಾವ ಮಾಲ್ದಾರೆ, ಸಾಮಾಜಿಕ ಕಾರ್ಯಕರ್ತ
ಕೊಡಗಿನ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವ (ಪಿಪಿಪಿ) ಸರ್ಕಾರ ಪಡೆದುಕೊಳ್ಳುವುದರಿಂದ ಈ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ. ಹಾಗಾಗಿ ಇದು ಉತ್ತಮ ನಿರ್ಧಾರ ಅಲ್ಲ.
ಶೋಭಾ, ಚೆನ್ನಯ್ಯನ ಕೋಟೆ ಗ್ರಾಮ
ಕೊಡಗಿನ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವ (ಪಿಪಿಪಿ) ಪಡೆದುಕೊಳ್ಳಲಾಗುತ್ತಿದೆ. ಸರ್ಕಾರದ ಈ ನೀತಿ ಉತ್ತಮವಾದದ್ದೇ. ಇದರಿಂದ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ನಿರ್ವಹಣೆ ಉತ್ತಮವಾಗಿರುತ್ತದೆ. ಆದರೆ ಖಾಸಗಿ ಸಂಸ್ಥೆಗಳು ಪ್ರವಾಸಿಗರನ್ನು ಲೂಟಿ ಮಾಡದಂತೆ, ಪ್ರವಾಸಿಗರಿಗೆ ಹೊರೆಯಾಗದ ರೀತಿ ಸರ್ಕಾರವೇ ದರ ನಿಗದಿ ಮಾಡಬೇಕು.
ಕೆ. ರೇವಣ್ಣ, ವಿರಾಜಪೇಟೆ
ಕೊಡಗಿನ ಬಹುತೇಕ ಪ್ರವಾಸಿ ತಾಣಗಳು ಸೌಕರ್ಯವಿಲ್ಲದೆ ಪ್ರವಾಸಿಗರಿಂದ ದೂರವಾಗಿವೆ. ಮೂಲ ಸೌಕರ್ಯಕ್ಕೆ ಖಾಸಗಿ ಸಂಸ್ಥೆಗಳ ಸಹಬಾಗಿತ್ವ ಪಡೆದರೂ ಪ್ರವಾಸಿಗರ ಪ್ರವೇಶ ಶುಲ್ಕ ಗಗನಮುಖಿ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕಾನೂನು ರೂಪಿಸಬೇಕು.
ಜಯಪ್ರಕಾಶ್, ಕಲ್ಕಂದೂರು ಗ್ರಾಮ ನಿವಾಸಿ
ಕೊಡಗಿನಲ್ಲಿ ಬೆರಣಿಕೆಯ ಪ್ರವಾಸಿ ತಾಣಗಳಿವೆ. ಅವುಗಳಿಗೆ ಸರ್ಕಾರವೇ ಮೂಲ ಸೌಕರ್ಯ ಕಲ್ಪಿಸಿದರೆ ಆದಾಯ ಕೂಡ ಸರ್ಕಾರಕ್ಕೆ ನೇರವಾಗಿ ಹೋಗುತದೆ. ಖಾಸಗಿಯವರ ಸಹಬಾಗಿತ್ವ ಪಡೆದರೆ. ಪ್ರವಾಸಿಗರಿಗೆ ದೊಡ್ಡ ಹೊರೆಯಾಗಲಿದೆ. ಏಜೆನ್ಸಿಯವರಿಗೆ ಇಷ್ಟ ಬಂದ ಶುಲ್ಕ ವಿಧಿಸಬಹುದು.
ಜಯಂತಿ ಶಿವಕುಮಾರ್, ಅಧ್ಯಕ್ಷೆ, ಪಟ್ಟಣ ಪಂಚಾಯತ್, ಸೋಮವಾರಪೇಟೆ
ಖಾಸಗಿ ಸಂಸ್ಥೆಗಳು ತಮ್ಮ ಲಾಭದ ಕಡೆಗೆ ಹೆಚ್ಚು ಗಮನ ಕೊಡುತ್ತವೆಯೇ ಹೊರತೂ ಸಾರ್ವಜನಿಕರ ಕ್ಷೇಮದ ಕಡೆಗೆ ಗಮನ ಕೊಡುವ ಸಾಧ್ಯತೆ ಕಡಿಮೆ. ಈಗಾಗಲೇ ಬಸ್ ನಿಲ್ದಾಣ, ಪಾರ್ಕಿಂಗ್ ಸ್ಥಳಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಕೊಟ್ಟಾಗ ಅವು ಹಣ ಮಾಡುವಲ್ಲಿ ತೋರಿಸುವ ಮುತುವರ್ಜಿಯನ್ನು ಅಲ್ಲಿಯ ಶೌಚಾಲಯ ಸೇರಿದಂತೆ ಸ್ವಚ್ಛತೆಯ ಕಡೆಗೆ ಗಮನ ಹರಿಸುವುದು ಕಡಿಮೆ. ಪ್ರವಾಸಿಗರು ಒಮ್ಮೆ ಬಂದ ಮೇಲೆ ಮತ್ತೊಮ್ಮೆ ಕೊಡಗಿಗೆ ಬರಬೇಕೆಂಬ ಮನಸ್ಸು ಬರುವ ರೀತಿಯಲ್ಲಿ ಸೇವೆ ಸಲ್ಲಿಸುವಂತೆ ಷರತ್ತು ವಿಧಿಸಿ ಖಾಸಗಿಯವರಿಗೆ ನೀಡುವುದು ಒಳ್ಳೆಯದು.
ಹುದೇರಿ ಜಾಗೃತ್ ಬೆಳ್ಯಪ್ಪ, ಮದೆ ಗ್ರಾಮ
ಪ್ರವಾಸೋದ್ಯಮ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸಲು ಖಾಸಗಿ ಸಹಬಾಗಿತ್ವ ಪಡೆದುಕೊಳ್ಳುವುದು ಖಂಡಿತವಾಗಿ ಮಾರಕ. ಯಾವುದೇ ಸರ್ಕಾರ ಅಧೀನದ ಸಂಸ್ಥೆಗಳು ಯಾರದೋ ಕಪಿಮುಷ್ಠಿಗೆ ನೀಡಿದಲ್ಲಿ ಸ್ಥಳೀಯ ಉದ್ಯಮಿಗಳು, ಗ್ರಾಮದ ನಿವಾಸಿಗಳು ಹಾಗೂ ಪ್ರವಾಸಿಗಾರಿಗೆ ಮಾರಕವಾಗಿ ಪರಿಣಮಿಸಲಿದೆ. ಪ್ರವಾಸೋದ್ಯಮಕ್ಕೆ ತೆರಿಗೆಯಲ್ಲಿ ಸಂಗ್ರಹವಾಗುತ್ತಿರುವ ಹಣ ಮೂಲಸೌಕರ್ಯಕ್ಕೆ ವಿನಿಯೋಗಿಸಬಹುದಾಗಿದೆ. ದೇಶ ವಿದೇಶಗಳಲ್ಲಿ ಪ್ರವಾಸೋದ್ಯಮದಲ್ಲಿ ರಾಜ್ಯ ಉತ್ತಮ ಹೆಸರು ಗಳಿಸಿದೆ. ಇದನ್ನು ಉಳಿಸಿಕೊಳ್ಳಲು ಪ್ರವಾಸೋದ್ಯಮವನ್ನು ಸರ್ಕಾರವೇ ಮುನ್ನಡೆಸುವುದು ಉತ್ತಮ.
ಸಿ.ಎಲ್. ವಿಶ್ವ, ಅಧ್ಯಕ್ಷ, ನಂಜರಾಯಪಟ್ಟಣ ಗ್ರಾ.ಪಂ.
ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ವ್ಯಾಪಾರ-ಸ್ನೇಹಿ ವಾತಾವರಣವನ್ನು ಸೃಷ್ಟಿಸಲು ಪ್ರವಾಸೋದ್ಯಮ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. 26 ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಸಾಹಸ, ಕೃಷಿ, ಮನರಂಜನೆ, ಕ್ಯಾರವಾನ್, ಸಂಸ್ಕೃತಿ, ಸಾಂಸ್ಕೃತಿಕ ಗ್ರಾಮ, ಪರಿಸರ, ಪರಂಪರೆ, ಹೋಮ್‌ಸ್ಟೇ, ಹೋಟೆಲ್, ಹೌಸ್‌ಬೋಟ್, ಮ್ಯೂಸಿಯಂ ಮತ್ತು ಗ್ಯಾಲರಿ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು. ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ಸ್ಮಾರಕಗಳ ನಿರ್ವಹಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಯೋಜನೆ ಜಾರಿಯಲ್ಲಿದೆ.
ಹೆಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವ