

ಬೆಳಗಾವಿ: ಚುನಾವಣೆಗಳಲ್ಲಿ ರೇಸಾರ್ಟ್ ಮತ್ತು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹೊರತುಪಡಿಸಿ ಉಳಿದೆಲ್ಲವುಗಳ ಚುನಾವಣೆಯಲ್ಲಿ ಇದ್ದೇ ಇರುತ್ತದೆ ಎಂದು ಹೇಳಿರುವ ಸಚಿವ ಸತೀಶ ಜಾರಕಿಹೊಳಿ, ಡಿಸಿಸಿ ಬ್ಯಾಂಕ್ ಚುನಾವಣೆಯ ರೇಸಾರ್ಟ್, ಟೂರ್ ಪಾಲಿಟಿಕ್ಸ್ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 9 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಉಳಿದ 7 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈ ಚುನಾವಣೆಗಾಗಿ ಒಂದು ವರ್ಷದಿಂದ ಬಾಲಚಂದ್ರ ಜಾರಕಿಹೊಳಿ ಪ್ರಯತ್ನ ಮಾಡುತ್ತಿದ್ದರು. ಅವರಿಂದಾಗಿ 9 ಸ್ಥಾನಗಳ ಅವಿರೋಧ ಆಯ್ಕೆಯಾಗಿದೆ. ನಿಪ್ಪಾಣಿಯಲ್ಲಿ ಉತ್ತಮ ಪಾಟೀಲಗೆ ಸಹಾಯ ಮಾಡುವುದಿಲ್ಲವೆಂದು ಮುಂಚೆಯೇ ಹೇಳಿದ್ದೇವು. ಈ ಸಲ ಅಣ್ಣಾಸಾಹೇಬ ಜೊಲ್ಲೆ ಜತೆಗೆ ನಿಂತಿದ್ದೇವೆ ಎಂದರು.
ಲಿಂಗಾಯತರನ್ನು ಒಡೆದು ಆಳುತ್ತಿದ್ದಾರೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಹೇಳಿದವರು ಯಾರು? ಇಂತಹುಗಳಿಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ಇವುಗಳಿಗೆ ತೆರಿಗೆ, ಜಿಎಸ್‌ಟಿ ಇಲ್ಲ. ಹೀಗಾಗಿ ಮಾತನಾಡುತ್ತಿರುತ್ತಾರೆ. ಚುನಾವಣೆಗಳಲ್ಲಿ ಅಡ್ಡ ಮತದಾನ ಇದ್ದೆ ಇರುತ್ತದೆ. ಯಾರಿಗೆ ಹೆಚ್ಚು ಆಶೀರ್ವಾದ ಮಾಡುತ್ತಾರೆ ಅವರು ಗೆಲ್ಲುತ್ತಾರೆ. ಅಶೋಕ ಪಟ್ಟಣ ರಿಸ್ಕ್ ಬೇಡವೆಂದು ನಾಮಪತ್ರ ಹಿಂಪಡೆದಿದ್ದರೂ ರಾಮದುರ್ಗದಲ್ಲಿ ಈಗಲೂ ಗೊಂದಲವಿದೆ ಎಂದು ತಿಳಿಸಿದರು.
ಕಾದು ನೋಡೋಣ:
ಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಬೆಳಗಾವಿಯಲ್ಲಿದ್ದ ಕಾರಣ ಸಿಎಂ ಸಿದ್ದರಾಮಯ್ಯನವರ ಭೋಜನಕೂಟಕ್ಕೆ ನಾನು ಹೋಗಿಲ್ಲ. ಅಲ್ಲಿ ಏನು ಚರ್ಚೆ ಆಗಿದೆ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳೇ ಇವತ್ತು ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದ ಅವರು, ಆರ್‌ಎಸ್‌ಎಸ್ ಬಗ್ಗೆ ಮಾತಾಡಿದ್ದಕ್ಕೆ ಸಚಿವ ಪ್ರಿಯಾಂಕ ಖರ್ಗೆಗೆ ಬೆದರಿಕೆ ಕರೆ ಬರುತ್ತಿರುವುದು ಸ್ವಾಭಾವಿಕ, ಅದೇನು ಹೊಸದಲ ಎಂದು ಹೇಳಿದರು.