ಗೋಲ್ಡನ್ ಚಾರಿಯೇಟ್ ರೈಲಿನಲ್ಲಿ ಪ್ರವಾಸ

Rail
Published on

ಬೆಂಗಳೂರು: ದೇಶದ ಐಷಾರಾಮಿ ಪ್ರವಾಸಿ ರೈಲು ಸೇವೆ ಗೋಲ್ಡನ್ ಚಾರಿಯೇಟ್ ರೈಲು ಸಂಚಾರ ಮತ್ತೆ ಆರಂಭವಾಗುತ್ತಿದೆ. 2021ರ ಜನವರಿಯಿಂದ ಐಆರ್​ಸಿಟಿಸಿ ವಿವಿಧ ಪ್ರವಾಸಿ ಪ್ಯಾಕೇಜ್​ಗಳನ್ನು ಆಯೋಜಿಸುತ್ತಿದೆ.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್​ಟಿಡಿಸಿ) ಒಡೆತನದಲ್ಲಿರುವ ಗೋಲ್ಡನ್ ಚಾರಿಯೇಟ್ ರೈಲು ಸೇವೆಯನ್ನು ರೈಲ್ವೆ ಇಲಾಖೆಯ ಐಆರ್​ಸಿಟಿಸಿ ನಿರ್ವಹಣೆ ಮಾಡುತ್ತಿದೆ. ರೈಲು ನಿರ್ವಹಣೆ ಮತ್ತು ಪ್ರವಾಸಿ ಪ್ಯಾಕೇಜ್ ಆಯೋಜನೆ ಹೊಣೆಯನ್ನು ಐಆರ್​ಸಿಟಿಸಿಗೆ ಕೆಎಸ್​ಟಿಡಿಸಿ ನೀಡಿದೆ. ಕರೊನಾ ಸೋಂಕಿನ ಭೀತಿ ಕಡಿಮೆಯಾಗಿರುವುದರಿಂದ ಹಲವು ಸುರಕ್ಷತಾ ಕ್ರಮಗಳ ಜತೆಗೆ ಪ್ರವಾಸಗಳನ್ನು ಆಯೋಜಿಸಲು ಐಆರ್​ಸಿಟಿಸಿ ಸಿದ್ಧತೆ ನಡೆಸಿದೆ. 2021ರ ಜನವರಿಯಿಂದ ಆರಂಭವಾಗುವಂತೆ ಕರ್ನಾಟಕ, ಕೇರಳ, ತಮಿಳುನಾಡಿನ ವಿವಿಧ ಸ್ಥಳಗಳಿಗೆ ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ಮರಳುವ ಪ್ರವಾಸಗಳನ್ನು ಆಯೋಜಿಸಲಾಗುತ್ತಿದೆ.

ಮೂರು ಬಗೆಯ ಪ್ರವಾಸ: ಹೆಮ್ಮೆಯ ಕರ್ನಾಟಕ, ದಕ್ಷಿಣ ಆಭರಣ, ಕರ್ನಾಟಕದ ಒಂದು ಮಿನುಗು ನೋಟ ಹೆಸರಿನ ಪ್ರವಾಸಗಳನ್ನು ಐಆರ್​ಸಿಟಿಸಿ ಆಯೋಜಿಸುತ್ತಿದೆ. ಹೆಮ್ಮೆಯ ಕರ್ನಾಟಕ ಪ್ರವಾಸವು 6 ರಾತ್ರಿ, 7 ಹಗಲಿನದ್ದಾಗಿರುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಐಹೊಳೆ, ಪಟ್ಟದಕಲ್ಲು, ಹಂಪಿ ಮತ್ತು ಗೋವಾಗಳ ವೀಕ್ಷಣೆ ಮಾಡಬಹುದಾಗಿದೆ. ದಕ್ಷಿಣ ಆಭರಣ ಕೂಡ 6 ರಾತ್ರಿ, 7 ಹಗಲಿನದ್ದಾಗಿದೆ. ಅದರಲ್ಲಿ ಮೈಸೂರು, ಹಂಪಿ, ಮಹಾಬಲಿಪುರ, ತಂಜಾವೂರು, ಚೆಟ್ಟಿನಾಡ್, ಕುಮಾರಕೋಮ್ ಮತ್ತು ಕೊಚ್ಚಿ ವೀಕ್ಷಣೆ ಮಾಡಿಸಲಾಗುತ್ತದೆ. ಕರ್ನಾಟಕದ ಒಂದು ಮಿನುಗು ನೋಟ 3 ರಾತ್ರಿ ಮತ್ತು 4 ಹಗಲಿನ ಪ್ರವಾಸಿ ಪ್ಯಾಕೇಜ್ ಆಗಿದೆ. ಇದರಲ್ಲಿ ಬಂಡೀಪುರ, ಮೈಸೂರು ಮತ್ತು ಹಂಪಿಗೆ ಕರೆದುಕೊಂಡು ಹೋಗಲಾಗುತ್ತದೆ.

ಊಟ, ವಸತಿ ವ್ಯವಸ್ಥೆ: ಪ್ರವಾಸಿ ಪ್ಯಾಕೇಜ್​ಗಳಿಗೆ ಬರುವವರಿಗೆ ಗೋಲ್ಡನ್ ಚಾರಿಯೇಟ್ ರೈಲಿನಲ್ಲಿ ಊಟ, ಮದ್ಯ ಸೇರಿ ಇನ್ನಿತರ ವ್ಯವಸ್ಥೆ ಮಾಡಲಾಗುತ್ತದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹವಾನಿಯಂತ್ರಿತ ಬಸ್, ಪ್ರವಾಸಿ ಮಾರ್ಗದರ್ಶಿ, ಸ್ಮಾರಕಗಳ ಪ್ರವೇಶ ಶುಲ್ಕವನ್ನು ಐಆರ್​ಸಿಟಿಸಿ ಪಾವತಿಸಲಿದೆ. ಅದರ ಜತೆಗೆ ರೈಲಿನಲ್ಲಿ ನವೀಕೃತ ಕೊಠಡಿ, ಎಲ್​ಇಡಿ ಟಿವಿ, ಒಟಿಟಿ ಮೂಲಕ ಚಲನಚಿತ್ರ ಸೇರಿ ಇನ್ನಿತರ ಮನರಂಜನಾ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿದೆ. ಪ್ರಯಾಣಿಕರ ಸುಕರಕ್ಷತೆಗಾಗಿ ಸಿಸಿ ಕ್ಯಾಮರಾ, ಅಗ್ನಿಶಾಮಕ ವ್ಯವಸ್ಥೆ ಅಳವಡಿಸಲಾಗಿದೆ. ಜತೆಗೆ ಸ್ಪಾ, ವ್ಯಾಯಾಮಕ್ಕಾಗಿ ಜಿಮ್ ಯಂತ್ರಗಳು ಇರಲಿವೆ.

ಹಲವು ರಿಯಾಯಿತಿ

ದೇಶೀಯ ಪ್ರವಾಸಿಗರು ಪ್ರವಾಸಕ್ಕೆ ಒಬ್ಬರಿಗೆ ಪೂರ್ಣ ವೆಚ್ಚ ನೀಡಿದರೆ, ಸಹವರ್ತಿ ಪ್ರಯಾಣಿಕರಿಗೆ ಶೇ. 50 ವೆಚ್ಚವನ್ನು ಭರಿಸಬಹುದಾಗಿದೆ. ಅದರ ಜತೆಗೆ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ಟಿಕೆಟ್ ಕಾಯ್ದಿರಿಸುವ ಭಾರತೀಯ ಪ್ರವಾಸಿಗರಿಗೆ ಶೇ. 35 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ. ಪ್ರವಾಸ, ರಿಯಾಯಿತಿಗಳ ಕುರಿತು ಹೆಚ್ಚಿನ ಮಾಹಿತಿಗೆ ಐಆರ್​ಸಿಟಿಸಿ ವೆಬ್​ಸೈಟ್ ಡಿಡಿಡಿ.ಜಟ್ಝಛಛ್ಞಿ್ಚಚ್ಟಜಿಟಠಿ.ಟ್ಟಜ ಗೆ ಭೇಟಿ ನೀಡಬಹುದಾಗಿದೆ. ದೂ: 82879 31971, 85959 31291ಗೆ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net