ಅಧಿಕಾರಾವಧಿ ಕೊನೆಗೆ ಪ್ರವಾಸ

15kolar3- cmc tour
Published on

ಕೋಲಾರ ನಗರಸಭೆ ಆಡಳಿತ ಮಂಡಳಿ ನ.1ಕ್ಕೆ ಅಂತ್ಯ | ಎಲ್ಲೆಡೆ ಚರ್ಚೆಗೆ ಗ್ರಾಸ

ಕೋಲಾರ: ಅಧಿಕಾರಾವಧಿ ಇನ್ನೇನು ಮುಗಿಯಿತು ಎನ್ನುವಾಗ ಸ್ವಚ್ಛತೆ ಬಗ್ಗೆ ಅಧ್ಯಯನಕ್ಕಾಗಿ ಕೋಲಾರ ನಗರಸಭೆ ಸದಸ್ಯರು, ಅಧಿಕಾರಿಗಳು ಬುಧವಾರ ಮಧ್ಯಪ್ರದೇಶದ ಇಂದೋರ್​ಗೆ ಪ್ರವಾಸ

ತೆರಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಸದಸ್ಯರ ಅಧ್ಯಯನ ಪ್ರವಾಸಕ್ಕಾಗಿ ಸರ್ಕಾರ ನಗರಾಭಿವೃದ್ಧಿ ಯೋಜನಾ ಕೋಶಕ್ಕೆ 21.70 ಲಕ್ಷ ರೂ. ಬಿಡುಗಡೆ ಮಾಡಿ 6 ತಿಂಗಳ ಕಳೆದಿದೆ. ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಕೆಲವೇ ದಿನಗಳಲ್ಲಿ ಮುಗಿಯುವ ಹಂತಕ್ಕೆ ಬರುತ್ತಿರುವಾಗ ಪ್ರವಾಸ ಬೇಕಿತ್ತೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸ್ವಚ್ಛ ಭಾರತ್​ ಮಿಷನ್​& 2.0 ಯೋಜನೆ, ಸಾಮರ್ಥ್ಯಾಭಿವೃದ್ಧಿ ಟಕ ಉತ್ತಮ ಸಾಧನೆ ಮಾಡಿರುವ ನಗರಗಳ ಪ್ರವಾಸ ಕೈಗೊಳ್ಳಲು ಅವಕಾಶವಿದೆ. ಅದೇ ರೀತಿ ಮಧ್ಯಪ್ರದೇಶದ ಇಂದೋರ್​ ನಗರದಲ್ಲಿ ಅಳವಡಿಸಿರುವ ನ ತ್ಯಾಜ್ಯ ನಿರ್ವಹಣೆ ಮಾದರಿ ಕ್ರಮ ಅಧ್ಯಯನ ಮಾಡಿ ಅದನ್ನು ಕೋಲಾರದಲ್ಲಿ ಅನುಷ್ಠಾನ ಮಾಡುವುದು ಪ್ರವಾಸದ ಉದ್ದೇಶ ಎನ್ನಲಾಗಿದೆ. ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಅಧಿಕಾರಿಗಳು ಸೇರಿ ಒಟ್ಟು 21 ಮಂದಿ ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ. ಸ್ವಚ್ಛ ನಗರ ವೀಕ್ಷಣೆ ಮಾಡಿ ಬಂದ ಸದಸ್ಯರು, ಅಧಿಕಾರಿಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಕಷ್ಟು ಸಮಯ ಬೇಕು, ಈಗ ಇದೆಲ್ಲವನ್ನೂ ಅನುಷ್ಠಾನಕ್ಕೆ ತರುವ ಮತ್ತು ಯೋಜನೆ ಲಾಭ ಸಾರ್ವಜನಿಕರಿಗೆ ದೊರೆಯುವ ಸಾಧ್ಯತೆ ಕಡಿಮೆಯಾಗಲಿದೆ. ಪ್ರವಾಸಕ್ಕೆ ನಗರಾಭಿವೃದ್ಧಿ ಇಲಾಖೆ ಅವಕಾಶ ನೀಡಿದೆ. ಆದರೆ, 5 ವರ್ಷಗಳಿಂದ ಸ್ವಚ್ಛತೆಗೆ ಯಾವುದೇ ಕ್ರಮಕೈಗೊಳ್ಳದ ಸದಸ್ಯರು ಈಗ ಇದ್ದಕ್ಕಿದ್ದಂತೆ ಅಧ್ಯಯನ ಹೆಸರಲ್ಲಿ ಇಂದೋರ್​ಗೆ ಹೋಗಿದ್ದು, ಇನ್ನೇನು ಕಾರ್ಯರೂಪಕ್ಕೆ ತರಲು ಸಾಧ್ಯ...?, ಈ ಪ್ರವಾಸದ ಜವಾಬ್ದಾರಿಯನ್ನು ಇಲಾಖೆಯೇ ಖಾಸಗಿ ಟೂರ್​ ಪ್ಯಾಕೇಜ್​ ಏಜೆನ್ಸಿಗೆ ನೀಡಿದ್ದು, ಪ್ರವಾಸ ಮೋಜು&ಮಸ್ತಿಗೆ ಸೀಮಿತ ಎಂಬ ಮಾತುಗಳು ದಟ್ಟವಾಗಿವೆ.

ಸ್ವಚ್ಛತೆಯಲ್ಲಿ ಕೋಲಾರವು ಮಾದರಿಯಾಗಿತ್ತು, ಅಧಿಕಾರಕ್ಕೆ ಬಂದವರು ಅದನ್ನು ಮುಂದುವರಿಸಿಕೊಂಡು ಹೋಗಲಿಲ್ಲ. ಈಗಿನ ಸದಸ್ಯರು, ಅಧಿಕಾರಿಗಳು ಕೊನೇ ಕ್ಷಣದಲ್ಲಿ ಹೋಗಿರುವುದು ದುಂದು ವೆಚ್ಚಕ್ಕಾಗಿ. ಇದೆಲ್ಲವೂ ಮುಂದಿನ ಚುನಾವಣೆ ಗಿಮಿಕ್​ ಆಗಿದೆ. | ಪಿ.ವಿ.ರಮಣ ಗಾಂಧಿನಗರ, ನಿವಾಸಿ

ಶ್ಲಾನೆಗೆ ಪಾತ್ರವಾಗಿದ್ದ ಕೋಲಾರ: ಬಿ.ಎಂ.ಮುಬಾರಕ್​ ಅವರು ನಗರಸಭೆ ಅಧ್ಯಕ್ಷರಾಗಿದ್ದಾಗ ನಗರಸಭೆಯು ಸ್ವಚ್ಛತೆಯಲ್ಲಿ ಮಾದರಿಯಾಗಿತ್ತು. ಆಗ ಪ್ರಶಂಸೆಗೂ ಪಾತ್ರವಾಗಿತ್ತು. ಕಸ ವಿಲೇವಾರಿ ಕುರಿತು ಅಧ್ಯಯನಕ್ಕಾಗಿ ದೇಶದ ಇತರ ರಾಜ್ಯಗಳ ಸ್ಥಳಿಯ ಸಂಸ್ಥೆಗಳ ಸದಸ್ಯರು ಇಲ್ಲಿಗೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಈಗ ವ್ಯವಸ್ಥೆ ಹದಗೆಡಿಸಿದ್ದು, ಈಗಿನ ಚುನಾಯಿತ ಸದಸ್ಯರಿಗೆ ಕೆಲಸ ಮಾಡಲು 6 ವರ್ಷ ಅವಕಾಶ ಸಿಕ್ಕಿತ್ತು, ಮುಂದಿನ ಚುನಾವಣೆ ಆಧಾರವಾಗಿಟ್ಟುಕೊಂಡು ಪ್ರವಾಸ ಕೈಗೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಅಧಿಕಾರಕ್ಕೆ ಬಂದಾಗಲೇ ಅಧ್ಯಯನಕ್ಕೆ ಕರೆದುಕೊಂಡು ಹೋಗಿದ್ದರೆ ಕಸ ವಿಲೇಗೆ ಅಗತ್ಯ ಕ್ರಮಕೈಗೊಳ್ಳಬಹುದಿತ್ತು. ಕೊನೇ ಅವಧಿಯಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿನ ಪದ್ಧತಿಯನ್ನು ಇಲ್ಲಿ ಅಳವಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು. | ಎಸ್​.ಆರ್​.ಮುರಳಿಗೌಡ ನಗರಸಭೆ ಸದಸ್ಯ

ಆಡಳಿತಕ್ಕೆ 15 ದಿನವಷ್ಟೇ ಅವಕಾಶ: ಸದಸ್ಯರು ಪ್ರವಾಸದಿಂದ ಹಿಂದಿರುಗಿದ ಬಳಿಕ ಉಳಿದಿರುವುದು 15 ದಿನ ಮಾತ್ರ, ಅವರ ಪ್ರವಾಸ ಅನುಭವ ಇಲ್ಲಿ ಕಾರ್ಯಗತಗೊಳಿಸಲು ಅವಕಾಶ ಇರುವುದು ಕಡಿಮೆ. ಅದಕ್ಕಾಗಿ 21.70 ಲಕ್ಷ ರೂ. ವೆಚ್ಚ ಮಾಡಬೇಕೇ? ಸದಸ್ಯರ ವರ್ತನೆ ತೆರಿಗೆ ವ್ಯರ್ಥ ಮಾಡುವಂತಿದ್ದು, ಇದನ್ನು ಜನ ಮೆಚ್ಚತ್ತಾರೆಯೇ?

-ಕಿರುವಾರ ಎಸ್​. ಸುದರ್ಶನ್​ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net