ಗ್ರಾಮಾಂತರ ಜಿಲ್ಲೆಗೆ ಪ್ಯಾಕೇಜ್ ಟೂರ್

Shivagange
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹಲವು ಐತಿಹಾಸಿಕ ಸ್ಥಳಗಳು, ಧಾರ್ಮಿಕ ಕೇಂದ್ರಗಳು ಹಾಗೂ ಬೆಟ್ಟಗುಡ್ಡಗಳ ಸಾಲಿನ ಪ್ರಾಕೃತಿಕ ಸೌಂದರ್ಯದಿಂದ ತನ್ನದೇ ವಿಶೇಷತೆ ಹೊಂದಿರುವ ಗ್ರಾಮಾಂತರ ಜಿಲ್ಲೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ.

ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ಪ್ರವಾಸ ಆಯೋಜನೆಗೆ ಚಾಲನೆ ನೀಡಿದ್ದು, ಗ್ರಾಮಾಂತರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಬಯಸುವ ಪ್ರವಾಸಿಗರು ಈ ಅವಕಾಶ ಬಳಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. ಜಿಲ್ಲೆಯಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿದ್ದು ಮೊದಲ ಹಂತದಲ್ಲಿ ಆಯ್ದ ಸ್ಥಳಗಳ ಭೇಟಿಗೆ ಪ್ರಾಯೋಗಿಕವಾಗಿ ಪ್ಯಾಕೇಜ್ ಟೂರ್ ಆಯೋಜಿಸಿದೆ, ಕುಂದಾಣ ಬೆಟ್ಟ, ಹುಲುಕುಡಿ ಬೆಟ್ಟ, ಆವತಿ ಬೆಟ್ಟ ಸೇರಿ ಮತ್ತಷ್ಟು ಬೆಟ್ಟಗಳು ಚಾರಣಿಗರ ಅಚ್ಚುಮೆಚ್ಚಿನ ತಾಣಗಳಿವೆ, ನೆಲಮಂಗಲದ ಬೈಲಾಂಜನೇಯ ದೇವಸ್ಥಾನ ಧಾರ್ಮಿಕ ಸ್ಥಳವಾಗಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮುಂದಿನ ದಿನಗಳಲ್ಲಿ ಈ ಸ್ಥಳಗಳಿಗೂ ಭೇಟಿ ನೀಡಲು ಪ್ರವಾಸೋದ್ಯಮ ಇಲಾಖೆಯಿಂದ ಟೂರ್ ಆಯೋಜಿಸುವ ಚಿಂತನೆ ಇದೆ. ಪ್ರಸ್ತುತ ಚಾಲನೆ ನೀಡಿರುವ ಒನ್ ಡೇ ಪ್ಯಾಕೇಜ್ ಟೂರ್‌ನ ಯಶಸ್ಸು ಆಧರಿಸಿ ಉಳಿದ ಸ್ಥಳಗಳಿಗೂ ವಿಸ್ತರಿಸುವ ಚಿಂತನೆ ಇದೆ.

ಯಶವಂತಪುರದಿಂದ ಚಾಲನೆ: ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಯಶವಂತಪುರದ ಕೆಎಸ್‌ಟಿಡಿಸಿ ಕಚೇರಿ ಬಳಿಯಿಂದ ಬಸ್ ಹೊರಡಲಿದೆ. ಮೊದಲಿಗೆ ದೇವನಹಳ್ಳಿ ಕೋಟೆ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇಗುಲ, ಮಧುರೆ ಹೋಬಳಿಯ ಚಿಕ್ಕಮಧುರೆಯಲ್ಲಿನ ಶ್ರೀ ಶನಿಮಹಾತ್ಮ ದೇವಸ್ಥಾನ, ಮಧ್ಯಾಹ್ನ 1.30ರಿಂದ 2 ಗಂಟೆ ಅವಧಿಯಲ್ಲಿ ಊಟಕ್ಕೆ ಸಮಯ ನೀಡಲಾಗುವುದು, ನಂತರ ನೆಲಮಂಗಲ ತಾಲೂಕು ದಾಬಸ್‌ಪೇಟೆಯಲ್ಲಿನ ಶಿವಗಂಗೆ ಬೆಟ್ಟ ವೀಕ್ಷಣೆ ಬಳಿಕ ಸಂಜೆ 6 ಗಂಟೆಯೊಷ್ಟೊತ್ತಿಗೆ ಯಶವಂತಪುರ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರವಾಸಕ್ಕೆ ಒಬ್ಬರಿಗೆ 830 ರೂಪಾಯಿ ಶುಲ್ಕ ನಿಗಧಿ ಮಾಡಲಾಗಿದೆ.

--

ಆನ್‌ಲೈನ್ ಬುಕಿಂಗ್: ಡಿಡಿಡಿ.ಠಿಛ್ಚ.್ಚಟ

080-43344334, 8970650070ಸಂಪರ್ಕಿಸಬಹುದು.

ಗ್ರಾಮಾಂತರ ಜಿಲ್ಲೆಯಲ್ಲಿ ಹಲವು ಪ್ರೇಕ್ಷಣೀಯ ಸ್ಥಳಗಳಿದ್ದು, ಒಂದು ದಿನದಲ್ಲಿ ಕೆಲವು ಪ್ರಮುಖ ಸ್ಥಳಗಳ ವೀಕ್ಷಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಂದು ದಿನದ ಪ್ರವಾಸ ಆಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಂಥ ಯೋಜನೆ ಜಾರಿಯಾಗಿದ್ದು, ಜಿಲ್ಲಾ ಪ್ರವಾಸೋದ್ಯಮಕ್ಕೆ ಇದು ಹೆಚ್ಚು ಸಹಕಾರಿಯಾಗಲಿದೆ. ಪ್ರವಾಸಿಗರು ಇದರ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬಹುದು.

ಪ್ರೀತಿ, ಸಹಾಯಕ ನಿರ್ದೇಶಕಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net