

ಶಿರಸಿ: ಮಲೆನಾಡಿನ ಪ್ರತಿಷ್ಠಿತ ಟಿಎಸ್‌ಎಸ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ತುರುಸಿನ ಪೈಪೋಟಿಯಲ್ಲಿ ಚುನಾವಣೆ ನಡೆಯುತ್ತಿದೆ.
ಆಡಳಿತ ಮಂಡಳಿಯ 15 ಸ್ಥಾನಗಳಿಗೆ ಪೈಪೋಟಿ ಇದ್ದು, 32 ಆಕಾಂಕ್ಷಿಗಳು ಕಣದಲ್ಲಿದ್ದಾರೆ. ಆ.20 ರಂದು ಬೆಳಗಿನಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅಂದೇ ಸಾಯಂಕಾಲ ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ಅ ವರ್ಗದ ಪ್ರಾಥಮಿಕ ಸಂಘಗಳ ಮೀಸಲು ಕ್ಷೇತ್ರದಲ್ಲಿ 4, ಬ ವರ್ಗದ ಸಾಮಾನ್ಯ ಸದಸ್ಯರ ಮೀಸಲು ಕ್ಷೇತ್ರದಲ್ಲಿ 7, ಮಹಿಳಾ ಮೀಸಲು ಕ್ಷೇತ್ರದಲ್ಲಿ 2, ಹಾಗೂ ಹಿಂದುಳಿದ ವರ್ಗದ ಅ ಹಾಗೂ ಬ ಕ್ಷೇತ್ರಗಳಲ್ಲಿ ತಲಾ 1 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಇದೇ ವರ್ಷ ಶತಮಾನ ಪೂರೈಸುತ್ತಿರುವ ಸಂಸ್ಥೆಗೆ, 5 ವರ್ಷಗಳಿಗೊಮ್ಮೆ ವಿವಿಧ ಕ್ಷೇತ್ರಗಳ ನಿರ್ದೇಶಕರ ಆಯ್ಕೆ ನಡೆಯುತ್ತದೆ. ಸುದೀರ್ಘ ಅವಧಿಯಲ್ಲಿ ಅವಿರೋಧ ಆಯ್ಕೆ ನಡೆದಿದ್ದೇ ಹೆಚ್ಚು. 2013 ರಲ್ಲಿ ಸಂಸ್ಥೆಯ ಕೆಲವು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು. 2018 ರಲ್ಲಿ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಈ ಬಾರಿ ಹೆಚ್ಚಿನ ಎಲ್ಲ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಹಾಲಿ ಆಡಳಿತ ಮಂಡಳಿ ಹಾಗೂ ಇನ್ನೊಂದು ಎದುರಾಳಿ ಬಣದ ಸದಸ್ಯರು ಭಾರಿ ಪ್ರಚಾರ ನಡೆಸಿದ್ದಾರೆ.
ಎರಡೂ ಬಣದವರು ಸದಸ್ಯರ ಮನೆಗಳಿಗೆ ತೆರಳಿ ಮನವೊಲಿಸುತ್ತಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ ಭರ್ಜರಿ ಪ್ರಚಾರ, ಪರ, ವಿರೋಧ ಚರ್ಚೆಗಳು ನಡೆದಿವೆ.
ಕಡವೆಯ ಶ್ರೀಪಾದ ಹೆಗಡೆ ಅವರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಅಡಕೆ ಬೆಳೆಗಾರರ ಸಂಸ್ಥೆಯ ಸಾರಥ್ಯವನ್ನು ಅವರ ನಂತರ ಅವರ ಅಳಿಯ ಶಾಂತಾರಾಮ ಹೆಗಡೆ ಶೀಗೆಹಳ್ಳಿ ವಹಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ, ಶಾಂತಾರಾಮ ಹೆಗಡೆ ಅವರ ಅನಾರೋಗ್ಯದ ಕಾರಣ ಶ್ರೀಪಾದರ ಪುತ್ರ ರಾಮಕೃಷ್ಣ ಹೆಗಡೆ ಕಾರ್ಯಾಧ್ಯಕ್ಷರಾಗಿದ್ದರು. ಈ ಬಾರಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಬಣವು, ಕಡವೆ ಕುಟುಂಬದ ಕೈಯ್ಯಲ್ಲೇ ಅಧಿಕಾರ ಉಳಿಸುವಂತೆ ಪ್ರಚಾರ ನಡೆಸಿದೆ. ಮತ್ತು ಕಳೆದ 10 ವರ್ಷಗಳಲ್ಲಿ ಸಂಸ್ಥೆ ವಿವಿಧ ಆಯಾಮಗಳಲ್ಲಿ ಬೆಳೆದ ವಿಷಯಗಳನ್ನು ಮತದಾರರಿಗೆ ಹೇಳುತ್ತಿದೆ.
ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರ ನೇತೃತ್ವದ ಇನ್ನೊಂದು ಬಣ ಹಾಲಿ ಆಡಳಿತ ಮಂಡಳಿ ವಿರುದ್ಧ ಪ್ರಚಾರ ನಡೆಸಿದೆ. ಹಾಲಿ ಆಡಳಿತ ಮಂಡಳಿ ಅಡಕೆ ಬೆಳೆಗಾರರ ಹಿತ ರಕ್ಷಣೆಯ ಬದಲು ಬೇರೆ ವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿದೆ.