ಸ್ಪರ್ಶ ಆಸ್ಪತ್ರೆ ಸಿಬ್ಬಂದಿ ಸಮೂಹ ನೃತ್ಯ

20HSN2
Published on

ಹಾಸನ: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಕರೊನಾ ವಿರುದ್ಧ ಸರ್ಕಾರಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಶುಕ್ರವಾರ ನಗರದ ಸ್ಪರ್ಶ ಆಸ್ಪತ್ರೆ ಸಿಬ್ಬಂದಿ ಸಮೂಹ ನೃತ್ಯದ ಮೂಲಕ ಅರಿವು ಮೂಡಿಸಿದರು.

ನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ 20ಕ್ಕೂ ಹೆಚ್ಚು ಸಿಬ್ಬಂದಿ ನೃತ್ಯ ನಡೆಸಿಕೊಟ್ಟರು. ಸುಲಭವಾಗಿ ಅರ್ಥವಾಗುವ ಹಾಡುಗಳ ರಚಿಸಲಾಗಿದ್ದು, ಸ್ವಚ್ಛತೆ, ಕರೊನಾ ಸೋಂಕಿತರು ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮ, ಕರೊನಾದಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

ಆಸ್ಪತ್ರೆಯ ಡಾ. ಸಂತೋಷ್ ಮಾತನಾಡಿ, ದೇಶಾದ್ಯಂತ ಆತಂಕ ಸೃಷ್ಟಿಸಿರುವ ಕರೊನಾ ವಿರುದ್ಧ ಸಾರ್ವಜನಿಕರು ಜಾಗೃತಗೊಳ್ಳಬೇಕಿದೆ. ಕೆಲ ದಿನಗಳ ಮಟ್ಟಿಗೆ ಪ್ರವಾಸ ಹಾಗೂ ಸಮಾರಂಭಗಳಿಂದ ದೂರವಿರಬೇಕು. ಕಾಯಿಲೆ ಕುರಿತು ಅಸಡ್ಡೆ ತೋರಿದರೆ ತೊಂದರೆಯಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದರು.

ಆಸ್ಪತ್ರೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಒಟ್ಟಾಗಿ ಕರೊನಾ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಬಸ್, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳಲ್ಲಿ ಸಾಮೂಹಿಕ ನೃತ್ಯದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಕರೊನಾ ಹಾಡು ಹಾಕಲಿ: ತ್ಯಾಜ್ಯ ಸಂಗ್ರಹಕ್ಕೆ ನಿತ್ಯ ಮನೆ ಎದುರು ಬರುವ ನಗರಸಭೆ ಆಟೋ ಹಾಗೂ ಟಿಪ್ಪರ್‌ಗಳಲ್ಲಿ ಕರೊನಾ ಸೋಂಕಿನ ಜಾಗೃತಿ ಮೂಡಿಸುವ ಹಾಡು ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಸಂಚರಿಸುವ 35 ಆಟೋ ಹಾಗೂ 5ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ ನಿತ್ಯ ಸಿನಿಮಾ ಹಾಡುಗಳನ್ನು ಕೇಳುವಂತಾಗಿದೆ. ಅದರ ಬದಲಿಗೆ ಸೋಂಕಿನ ವಿರುದ್ಧ ಕೈಗೊಳ್ಳಬೇಕಿರುವ ಕ್ರಮದ ಕುರಿತು ಅರಿವು ಮೂಡಿಸುವ ಹಾಡು ಹಾಕಿದರೆ ಅನುಕೂಲವಾಗುತ್ತದೆ. ಈಗಾಗಲೇ ಮೊಬೈಲ್ ರಿಂಗ್ ಟೋನ್‌ಗಳಲ್ಲಿ ಕರೊನಾ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ಪದ್ಧತಿ ನಗರಸಭೆ ಆಟೋಗಳಿಗೂ ಅನ್ವಯವಾಗಬೇಕು ಎಂದರು.

ಕರವೇ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್, ಉಪಾಧ್ಯಕ್ಷ ಸೀತಾರಾಮ್, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ಮಹಿಳಾ ಘಟಕ ಅಧ್ಯಕ್ಷೆ ರೇಖಾ ಮಂಜುನಾಥ್, ದೇವಿಕಾ, ಬೋರೇಗೌಡ, ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net