22ರಂದು ತೊಟ್ಟಿಲಮಡು ಜಾತ್ರೆ

18mlk01
Published on

ಮೇಲುಕೋಟೆ: ಮಕ್ಕಳಭಾಗ್ಯ ಕರುಣಿಸುವ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ವಿಶಿಷ್ಟ ತೊಟ್ಟಿಲಮಡು ಜಾತ್ರೆ ಅಷ್ಟತೀರ್ಥೋತ್ಸವ ನ.22ರಂದು ವಿಜೃಂಭಣೆಯಿಂದ ನಡೆಯಲಿದೆ.
ಈ ವಿಶಿಷ್ಟ ಸಂಪ್ರದಾಯ, ಪರಂಪರೆಯ ಆಚರಣೆ ನಂತರ ಅಪೇಕ್ಷಿತ ಫಲ ನೀಡುತ್ತಿರುವ ಕಾರಣ ಭಕ್ತರ ನಂಬಿಕೆಗೆ ಇಂಬು ದೊರೆಯುತ್ತಿದೆ. ವೈದ್ಯರೂ ಕೈಚೆಲ್ಲಿದ ಎಷ್ಟೋ ಪ್ರಕರಣಗಳ ದಂಪತಿಗೆ ಈ ಉತ್ಸವದಲ್ಲಿ ಭಾಗಿಯಾದ ನಂತರ ಮಕ್ಕಳಾಗಿರುವ ಕಾರಣ ಮಹೋತ್ಸವದಲ್ಲಿ ಹರಕೆ ಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ. ಬಹುಕಾಲ ಮಕ್ಕಳಾಗದ ದಂಪತಿ ಮತ್ತು ಮುದ್ದಾದ ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂತಿ ಹರಕೆ ಕಟ್ಟಿಕೊಂಡು ಮಹೋತ್ಸವದಲ್ಲಿ ಭಾಗಿಯಾಗಿ ಮಡಿಲು ತುಂಬುವುದು ತೊಟ್ಟಿಲಮಡು ಜಾತ್ರೆಯ ವಿಶೇಷ.


ಹೀಗಿದೆ ಆಚರಣೆ: ಕಲ್ಯಾಣಿ ತೀರದಲ್ಲಿ ಪತ್ನಿಯ ಮಡಿಲು ತುಂಬಿ ಚೆಲುವನಾರಾಯಣಸ್ವಾಮಿಯ ಪಾದುಕೆಯ ಪಲ್ಲಕ್ಕಿಯೊಡನೆ ಸಾಗಿ ಗಿರಿಶಿಖರಗಳ ಮಧ್ಯೆ ಇರುವ ಔಷಧೀಯ ಗುಣವಿರುವ ಎಂಟು ತೀರ್ಥಗಳಲ್ಲಿ ಸ್ನಾನ ಮಾಡಬೇಕು. ಈ ಎಲ್ಲ ಕೊಳಗಳಿಗೆ ಪಾದುಕೆಯೊಂದಿಗೆ ಹೋಗಿ ಬರಲು ಕನಿಷ್ಠ 20 ಕಿ.ಮೀ. ಕ್ರಮಿಸ ಬೇಕಾಗುತ್ತದೆ. ಉತ್ಸವದ ಮಧ್ಯೆ ಸಾಗುತ್ತಿದ್ದರೆ, ಈ ಶ್ರಮ ಗಣನೆಗೆ ಬರುವುದಿಲ್ಲ. ನಡೆಯಲು ಸಾಧ್ಯವಾಗದ ದಂಪತಿ ಪಂಚಕಲ್ಯಾಣಿ ಮತ್ತು ವೈಕುಂಠಗಂಗೆಯಲ್ಲಿ ಸ್ನಾನ ಮಾಡಿ ಅಲ್ಲಿರುವ ತೊಟ್ಟಿಲಿಗೆ ಪೂಜೆ ಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ದೇವರ ನೈವೇದ್ಯದ ಹಾಲು-ಹಣ್ಣು, ತೀರ್ಥಬಿಟ್ಟರೆ ಬೇರೇನೂ ಸೇವಿಸುವಂತಿಲ್ಲ. ಇನ್ನು ಅನುರೂಪ ಕಂಕಣಭಾಗ್ಯ ಅಪೇಕ್ಷಿಸುವವರು ಸಹ ಉತ್ಸವದಲ್ಲಿ ಪಾಲ್ಗೊಂಡರೆ ಶೀಘ್ರ ಕಂಕಣಬಲ ಕೂಡಿಬರಲಿದೆ ಎಂಬ ನಂಬಿಕೆ ಅನೂಚಾನವಾಗಿ ರೂಢಿಯಲ್ಲಿದೆ.

ದಿನದ ಕಾರ್ಯಕ್ರಮಗಳು: ಅಷ್ಟತೀರ್ಥೋತ್ಸವ ನ. 22ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಸ್ವಾಮಿಯ ಪಲ್ಲಕ್ಕಿ ದೇಶಿಕರ ಸನ್ನಿಧಿಗೆ ಆಗಮನ, ಬೆಳಗ್ಗೆ 8.30ಕ್ಕೆ ರಾಜಮುಡಿಯೊಂದಿಗೆ ಕಲ್ಯಾಣಿಗೆ ಉತ್ಸವ, ಬೆಳಗ್ಗೆ 9 ಕಲ್ಯಾಣಿಯಲ್ಲಿ ಪವಿತ್ರ ಸ್ನಾನದೊಂದಿಗೆ ಆರಂಭವಾಗುವ ಅಷ್ಟತೀರ್ಥೋತ್ಸವ ಸಂಜೆ 5ಗಂಟೆ ವೇಳೆಗೆ ಕಣಿವೆ ಬಳಿ ಇರುವ ವೈಕುಂಠಘಂಟೆ ತೊಟ್ಟಿಲಮಡು ಬಳಿ ಮುಕ್ತಾಯವಾಗುತ್ತದೆ.


ಋಷಿಮುನಿಗಳು ಭಗವಂತನನ್ನು ಧ್ಯಾನ ಮಾಡಿ ಸಾಕ್ಷಾತ್ಕಾರ ಪಡೆದ ಎಂಟು ಪವಿತ್ರ ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರುವ ಆಚರಣೆಯೇ ಅಷ್ಟತೀರ್ಥೋತ್ಸವವಾಗಿದ್ದು, ಉತ್ಸವ ಆರಂಭದ ವೇಳೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿದರೆ ಸಂಜೆ ವೈಕುಂಠಘಂಟೆಯಲ್ಲಿ ಕೊನೆಯ ಅಭಿಷೇಕ ನಡೆಯುತ್ತದೆ. ನಂತರ ಶ್ರೀಯೋಗಾನರಸಿಂಹಸ್ವಾಮಿಯ ಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಟತೀರ್ಥೋತ್ಸವ ಮುಕ್ತಾಯವಾಗಲಿದೆ.

ರಾಜಮುಡಿ ಉತ್ಸವ: ಪ್ರಖ್ಯಾತ ರಾಜಮುಡಿ ಉತ್ಸವ ನ.20ರ ಸೋಮವಾರ ರಾತ್ರಿ 7 ಗಂಟೆಗೆ ನಡೆಯಲಿದೆ. ಮೈಸೂರಿನ ರಾಜ ಒಡೆಯರ್ ಸಮರ್ಪಿಸಿರುವ ವಜ್ರಖಚಿತ ರಾಜಮುಡಿ ಕಿರೀಟ, ಗಂಡಭೇರುಂಡ ಪದಕ ಹಾಗೂ ಇತರ ಅಮೂಲ್ಯ ಆಭರಣಗಳನ್ನು ಚೆಲುವನಾರಾಯಣನಿಗೆ ತೊಡಿಸಿ ರಾಜಮುಡಿ ಉತ್ಸವ ನೆರವೇರಿಸಲಾಗುತ್ತದೆ. ಕಾರ್ತಿಕ ಮಾಸದ ರಾಜಮುಡಿ ಬಹ್ಮೋತ್ಸವ ನ.17ರಿಂದ ಆರಂಭವಾಗಿದ್ದು, 25ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net