

ಗಂಗೊಳ್ಳಿ: ಒಂದು ವಾರದಿಂದೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಕುಂದಾಪುರ ಮತ್ತು ಬೈಂದೂರು ತಾಲೂಕಿನ ಹಲವೆಡೆ ಕಡಲ್ಕೊರೆತ ಹೆಚ್ಚಾಗುತ್ತಿದೆ. ಕಂಚುಗೋಡು ಪರಿಸರದ ಕಡಲ ತೀರದಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದ್ದು, ಕಡಲಿನ ಅಲೆಗಳು ಮುಂದೊತ್ತಿ ಬಂದು ತೀರ ಪ್ರದೇಶ ಕಬಳಿಸುತ್ತಿದೆ. ಕಡಲಿನ ಅಲೆಗಳ ಆರ್ಭಟಕ್ಕೆ ತೀರ ಪ್ರದೇಶದ ನಿವಾಸಿಗಳು ಬೆಚ್ಚಿ ಬಿದ್ದಿದ್ದು, ಆತಂಕಕ್ಕೊಳಗಾಗಿದ್ದಾರೆ. ಕಂಚುಗೋಡು ಕಡಲ ತೀರದಲ್ಲಿರುವ ತೆಂಗಿನಮರಗಳು ಕಡಲ ಪಾಲಾಗುವ ಭೀತಿ ಎದುರಾಗಿದ್ದು, ಕಡಲಿನ ಆರ್ಭಟ ಮುಂದುವರಿದಲ್ಲಿ ತೀರ ಪ್ರದೇಶದಲ್ಲಿರುವ ಮನೆಗಳಿಗೂ ಅಪಾಯ ತಪ್ಪಿದ್ದಲ್ಲ. ಮೂರ‌್ನಾಲ್ಕು ವರ್ಷಗಳಿಂದ ಕಂಚುಗೋಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದ್ದು, ಕಡಲ್ಕೊರೆತ ತಡೆಯಲು ಶಾಶ್ವತ ಯೋಜನೆ ರೂಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಂಚುಗೋಡು ಪ್ರದೇಶದಲ್ಲಿ ಕಳೆದ ಮೂರ‌್ನಾಲ್ಕು ದಿನಗಳಿಂದ ಕಡಲಿನ ಆರ್ಭಟ ಹೆಚ್ಚಾಗಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗುತ್ತಿದೆ. ತೀರ ಪ್ರದೇಶದ ಭೂಭಾಗ ಕಡಲ ಪಾಲಾಗಿದ್ದು, ತೀರ ಪ್ರದೇಶದಲ್ಲಿರುವ ತೆಂಗಿನ ಮರಗಳು ಹಾಗೂ ಮನೆಗಳು ಅಪಾಯದಂಚಿನಲ್ಲಿದೆ. ಆದ್ದರಿಂದ ಕಡಲ್ಕೊರೆತ ತಡೆಗೆ ಶೀಘ್ರ ತುರ್ತು ಕ್ರಮಕೈಗೊಳ್ಳಬೇಕು.-ಸದಾಶಿವ ಕಂಚುಗೋಡು ಅಧ್ಯಕ್ಷರು, ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘ, ಗಂಗೊಳ್ಳಿ