ರಾಜಧಾನಿಯಲ್ಲಿ ಧಾರಾಕಾರ ವರ್ಷಧಾರೆ: ವಿದ್ಯಾಪೀಠದಲ್ಲಿ 46 ಮಿಮೀ ಮಳೆ

Sudhee_20_Rain_Fall_@_Town_Hall (4)
Published on

ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರವೂ ಧಾರಾಕಾರವಾಗಿ ಮಳೆ ಬಿದ್ದಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಸುರಿಯಿತು.

ಮಧ್ಯಾಹ್ನ ಮತ್ತು ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು. ತಡರಾತ್ರಿವರೆಗೂ ಮಳೆಯ ಹನಿಗಳು ಬೀಳುತ್ತಿತ್ತು. ಇದರಿಂದಾಗಿ ದೈನಂದಿನ ಕಾರ್ಯಗಳಿಗೂ ಅಡ್ಡಿ ಉಂಟಾಯಿತು. ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ನಷ್ಟ ಅನುಭವಿಸಿದರು.

ನಗರದ ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ಮಳೆನೀರು ನಿಂತಿತ್ತು. ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ತುಸು ಸಂಚಾರ ಸಿಕ್ಕು ಉಂಟಾಯಿತು. ಸಂಜೆ ವೇಳೆ ಮನೆಗೆ ತೆರಳುವ ಧಾವಂತದಲ್ಲಿ ಮಳೆಯಲ್ಲಿ ನೆನೆದುಕೊಂಡು ತೆರಳಿದ್ದರು.ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ, ಕೆಂಗೇರಿ, ಚಾಮರಾಜಪೇಟೆ, ಬಸವನಗುಡಿ, ಆರ್.ಟಿ. ನಗರ, ಬಿಟಿಎಂ ಲೇಔಟ್, ಕೆ.ಆರ್.ಪುರ, ಸಹಕಾರನಗರ, ಜಯನಗರ, ಬಸವನಗುಡಿ, ಹನುಮಂತನಗರ, ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ದಾಸರಹಳ್ಳಿ, ಪೀಣ್ಯ, ನೆಲಮಂಗಲ, ಹೆಬ್ಬಾಳ, ಯಲಹಂಕ ವೈಟ್‌ಪೀಲ್ಡ್ ಹಾಗೂ ಸರ್ಜಾಪುರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು.

ರಸ್ತೆಗುಂಡಿ ಕಾರುಬಾರು: ಮಳೆಯಿಂದಾಗಿ ರಾಜಧಾನಿಯಲ್ಲಿ ಮತ್ತೆ ರಸ್ತೆ ಗುಂಡಿಗಳ ಕಾರುಬಾರು ಶುರುವಾಗಿದೆ. ಇದರಿಂದ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದಿದೆ. ಪ್ರತಿ ರಸ್ತೆಯಲ್ಲಿ ಕನಿಷ್ಠ ನಾಲ್ಕೈದು ಗುಂಡಿ ದರ್ಶನವಾಗುತ್ತದೆ. ಅಡ್ಡರಸ್ತೆಗಳು, ಗಲ್ಲಿಗಳಲ್ಲಿನ ಇಕ್ಕಟ್ಟಾದ ಹಾದಿ ತುಂಬ ಹದಗೆಟ್ಟಿವೆ. ಈಗಾಗಲೇ ಮುಚ್ಚಿರುವ ಗುಂಡಿಗಳು ಹಾಗೂ ರಸ್ತೆಗಳಿಗೆ ಹಾಕಿರುವ ಡಾಂಬರ್ ಕಿತ್ತು ಬರುತ್ತಿವೆ. ಕೆಲ ರಸ್ತೆಗಳಿಗೆ ಡಾಂಬರ್ ಹಾಕಿದರೆ ಹೊರತು ಬಹುತೇಕ ರಸ್ತೆಗಳು ಹಾಳಾಗಿವೆ.ಪ್ರತಿ ನಿತ್ಯ ಪ್ರಾಣಭಯದಲ್ಲೇ ವಾಹನ ಚಲಾಯಿಸುತ್ತಿದ್ದಾರೆ.

ಇನ್ನಷ್ಟು ಜೋರು ಮಳೆ: ಬೆಂಗಳೂರು ನಗರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 5 ದಿನ ಭಾಗಶಃ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ. ಈ ಅವಧಿಯಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿ.ಸೆ. ಇರಲಿದೆ. ಕೆಲ ಬಡಾವಣೆಗಳಲ್ಲಿ ಮಳೆಗಿಂತ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ.

ಎಲ್ಲೆಲ್ಲಿ ಎಷ್ಟು ಮಳೆ?

ವಿದ್ಯಾಪೀಠ 46, ರಾಜರಾಜೇಶ್ವರಿನಗರ 30, ಬೊಮ್ಮನಹಳ್ಳಿ 29, ಕೋರಮಂಗಲ 29, ನಾಯಂಡಹಳ್ಳಿ 28, ಹಂಪೆನಗರ 27, ಪಟ್ಟಾಭಿರಾಮನಗರ 27, ಎಚ್‌ಎಸ್‌ಆರ್ ಲೇಔಟ್ 20, ವಿಶ್ವೇಶ್ವರಯ್ಯಪುರ 19, ವಿದ್ಯಾರಣ್ಯಪುರ 19, ಮಾರುತಿ ಮಂದಿರ 18, ವಿ.ನಾಗೇನಹಳ್ಳಿ 15 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net