

ಹೊನ್ನಾವರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಕೆಲವೆಡೆ ಹಾನಿ ಸಂಭವಿಸಿದೆ.
ತಾಲೂಕಿನ ಕುಳಕೋಡದ ರಾಜು ದೇಶಭಂಡಾರಿ ಅವರ ಮನೆಯ ಗೋಡೆಗೆ ಸಮೀಪದ ಗುಡ್ಡದ ಬಂಡೆಗಲ್ಲು ಬಂದು ಅಪ್ಪಳಿಸಿ ಹಾನಿ ಉಂಟು ಮಾಡಿದೆ. ಮನೆಯ ಹತ್ತಿರದ ಗುಡ್ಡದ ಮಣ್ಣು ಸಡಿಲಗೊಂಡು ಬಂಡೆಗಲ್ಲು ಜಾರಿದೆ. ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಸರಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸನಮೋಟೆಯ ಸರ್ಕಾರಿ ಶಾಲೆಯ ಆವರಣ ನೀರು ತುಂಬಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಪರದಾಡುವಂತಾಯಿತು. ಗ್ರಾಮೀಣ ಭಾಗದಲ್ಲಿ ಗಾಳಿ- ಮಳೆಗೆ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ. ತಾಲೂಕಿನ ಶರಾವತಿ ಮತ್ತು ಗುಂಡಬಾಳ ನದಿ ತುಂಬಿ ಹರಿಯುತ್ತಿದೆ. ಗುರುವಾರ ಮಧ್ಯಾಹ್ನದ ನಂತರ ಮಳೆ ಕಡಿಮೆಯಾಗಿರುವುದರಿಂದ ನೆರೆ ಹಾವಳಿಯ ಭೀತಿ ದೂರವಾಗಿದೆ.