

ವಿರಾಜಪೇಟೆ: ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಗೋಣಿಕೊಪ್ಪ ರಸ್ತೆಯ ರಾಜಕಾಲುವೆ ಬಳಿ ಮತ್ತೊಮ್ಮೆ ನೀರು ಮುಖ್ಯರಸ್ತೆಯ ಮೇಲೆ ಹರಿಯುತ್ತಿದೆ.
ನಾಲ್ಕು ಅಡಿಗಿಂತಲೂ ಹೆಚ್ಚಿನ ನೀರು ಹರಿಯುತ್ತಿದ್ದು, ಗೋಣಿಕೊಪ್ಪ ವಿರಾಜಪೇಟೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಮುಖ್ಯರಸ್ತೆಯು ಒಂದೇ ತಿಂಗಳಿನಲ್ಲಿ ಮತ್ತೊಮ್ಮೆ ಮುಳುಗಡೆಯಾಗಿದೆ. ಸಾರ್ವಜನಿಕರ ಮುಳುಗಡೆ ಯಾಗಿರುವ ರಸ್ತೆಯಲ್ಲೇ ಸಂಚರಿಸುತಿದ್ದಾರೆ. ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣ, ಅರಸು ನಗರ, ಮಟನ್ ಮಾರ್ಕೆಟ್, ಸುಭಾಷ್ ನಗರ, ವಿಜಯನಗರ, ಚೌಕಿ ಮುಂತಾದ ಕಡೆಗಳಿಂದ ಮಳೆ ನೀರು ಹರಿದು ಇದೆ ಕಾಲುವೆಯನ್ನು ಸೇರುತ್ತದೆ. ಪ್ರಮಾಣಕ್ಕಿಂತ ಹೆಚ್ಚಿನ ನೀರು ಹರಿದುಬರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆ ಹರಿಯುತ್ತದೆ.
ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಇದೇ ರೀತಿ ಮಳೆಯ ಅಬ್ಬರ ಮುಂದುವರೆದರೆ ಅಕ್ಕಪಕ್ಕದಲ್ಲಿರುವ ಅಂಗಡಿ ಮಳಿಗೆಗಳ ಒಳಗೆ ಮೋರಿಯ ನೀರು ನುಗ್ಗುವ ಸಂಭವವಿದೆ.
ರಾಜಕಾಲುವೆಯು ತುಂಬಾ ಚಿಕ್ಕದಾಗಿದ್ದು, ವಿಪರೀತ ಮಳೆ ಬಂದಂತಹ ಸಂದರ್ಭದಲ್ಲಿ ಕಾಲುವೆಯ ತುಂಬಾ ನೀರು ತುಂಬಿ ವೇಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆ ಹರಿಯುತ್ತದೆ. ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಈ ಸಮಸ್ಯೆ ತಲೆದೋರುತ್ತಿದ್ದು, ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.