ಬಿಸಿಲೂರಿನಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ

SHELLAGI VILLEGE
ತಾಳಿಕೋಟಿ ತಾಲೂಕಿನ ಶಳ್ಳಗಿ ಗ್ರಾಮದಲ್ಲಿ ಸಂಗಮ್ಮ ಬಸನಗೌಡ ನಾಡಗೌಡ ಇವರ ಮನೆ ಮಳೆಗೆ ಕುಸಿದಿರುವುದು.
Published on

ವಿಜಯಪುರ: ಭೀಕರ ಬರ, ಗರಿಷ್ಠ ತಾಪಮಾನದಿಂದಾಗಿ ಬೇಸತ್ತಿದ್ದ ಬಿಸಿಲೂರಿನ ಜನತೆಗೆ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆ ಒಂದೆಡೆ ಸಂತಸ ತಂದರೆ ಇನ್ನೊಂದೆಡೆ ಸಂಕಷ್ಟಕ್ಕೆ ಸಿಲುಕಿಸಿದೆ.

ಕಳೆದ 24 ಗಂಟೆಯಲ್ಲಿ ಒಟ್ಟು 32.7 ಮಿಮೀ ಮಳೆಯಾಗಿದೆ. ಸಿಡಿಲು-ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಗೆ ಗ್ರಾಮೀಣ ಭಾಗದಲ್ಲಿ ಜಲಮೂಲಗಳೆಲ್ಲ ಚೇತರಿಸಿಕೊಂಡಿವೆ. ಕೆರೆ-ಕಟ್ಟೆಗಳಲ್ಲಿ ನೀರು ಜಿನುಗುತ್ತಿದೆ. ಅಂತರ್ಜಲ ಹೆಚ್ಚಳವಾಗಿದ್ದು, ಬಾವಿ, ಹೊಂಡ, ಬಾಂದಾರಗಳಲ್ಲಿ ನೀರು ಸಂಗ್ರಹಗೊಂಡಿದೆ. ಆದರೆ, ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಇಡೀ ರಾತ್ರಿ ಜನರು ನಿದ್ದೆಗಟ್ಟು ನೀರು ಹೊರಹಾಕಲು ಹರಸಾಹಸಪಟ್ಟಿದ್ದಾರೆ.

ನಗರದಲ್ಲಿ ನರಕಯಾತನೆ

ಸೋಲಾಪುರ ರಸ್ತೆಯಲ್ಲಿರುವ ಪೊಲೀಸ್ ಕ್ವಾಟರ್ಸ್‌ಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದು. ಕೂಡಲೇ ಜೆಸಿಬಿ ಸಹಾಯದಿಂದ ಚರಂಡಿ ಶುಚಿಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಲಾಯಿತು. ಬಡಿಕಮಾನ್ ರಸ್ತೆಯಲ್ಲಿ ಸೊಂಟದೆತ್ತರಕ್ಕೆ ನೀರು ಹರಿದಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಯಿತಲ್ಲದೇ ಸುತ್ತಲಿನ ಮಳಿಗೆಗಳು, ಮನೆಗಳು ಹಾಗೂ ಮಸೀದಿ ಮತ್ತು ಮಂದಿರಗಳಿಗೆ ನೀರು ನುಗ್ಗಿತು. ಮನಗೂಳಿ ಅಗಸಿಯಲ್ಲಿ ಚರಂಡಿಗಳು ಉಕ್ಕಿ ಹರಿದ ಪರಿಣಾಮ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದರು. ಶಹಾಪೇಟಿ, ಎಪಿಎಂಸಿ ಮತ್ತಿತರ ಕೊಳಚೆ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ನರಕ ಯಾತನೆ ಅನುಭವಿಸಬೇಕಾಯಿತು.

ಗ್ರಾಮೀಣರಿಗೆ ಸಂಕಷ್ಟ

ಗ್ರಾಮೀಣ ಭಾಗಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ಬದುಕು ಬೀದಿಗೆ ಬಂದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಪುತಳಾಬಾಯಿ ಸಾಬು ಬಬಲೇಶ್ವರ ಇವರ ವಾಸದ ಮನೆ ಕುಸಿದಿದೆ. ಮನೆಯಲ್ಲಿದ್ದ ಸುಧಾಕರ ಪರಶುರಾಮ ಬೆಳ್ಳುಬ್ಬಿ ಎಂಬ ಯುವಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಳಿಕೋಟಿ ತಾಲೂಕಿನ ಶಳ್ಳಗಿ ಗ್ರಾಮದಲ್ಲಿ ಸಂಗಮ್ಮ ಬಸನಗೌಡ ನಾಡಗೌಡ ಇವರ ಮನೆ, ಕೊಲ್ಹಾರ ತಾಲೂಕಿನಲ್ಲಿ ಜಯಶ್ರೀ ತೆಗ್ಗಿ, ಸಿದ್ದಪ್ಪ ಮೇಟಿ ಹಾಗೂ ಶ್ರೀಶೈಲ ಜೈನಾಪುರ ಎಂಬುವರ ಮನೆ ಭಾಗಶಃ ಕುಸಿದಿದೆ. ಚನ್ನಾಮಲ್ಲಪ್ಪ ಗಣಗೇರ, ಶೀವಪ್ಪ ಬಿಡಿಗೇರ ಹಾಗೂ ಶಿವಪ್ಪ ಅಗಸರ ಎಂಬುವರ ಮನೆ ಸಹ ಭಾಗಶಃ ಕುಸಿದಿದ್ದು ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಯರನಾಳ ಗ್ರಾಮದ ನಿಂಗವ್ವ ಗುರಪ್ಪ ಕಾಳಗಿ ಇವರ ಕಚ್ಚಾ ಮನೆ ಭಾಗಶಃ ಕುಸಿದಿದೆ. ನಿಡಗುಂದಿ ತಾಲೂಕಿನ ಚಿಮ್ಮಲಗಿ ಹಾಗೂ ವಂದಾಲ ಗ್ರಾಮದಲ್ಲಿ ಹಲವು ಮನೆಗಳು ಬಿದ್ದು ಹಾನಿಯಾಗಿವೆ. ಬಾಗೇವಾಡಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಮಲ್ಲಮ್ಮ ಬಸಪ್ಪ ಅಗಸರ ಹಾಗೂ ರಾಜಮಾ ರಾಜುದ್ದಿನ ಉಣಕಲ ಇವರ ಮನೆಗಳು ಹಾನಿಯಾಗಿವೆ. ಅಧಿಕಾರಿಗಳು ವರದಿ ಸಂಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net