ಅಕ್ಕಿಆಲೂರ ಸುತ್ತಮುತ್ತ ಧಾರಾಕಾರ ಮಳೆ

AKR RAIN
Published on

ಅಕ್ಕಿಆಲೂರ: ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಧಾರಾಕಾರ ಮಳೆ ಸರಿಯಿತು.

ಮಳೆಯಿಂದಾಗಿ ಕೆಲವೆಡೆ ಚರಂಡಿ ತುಂಬಿ ರಸ್ತೆಗಳಲ್ಲಿ ಕೊಳಚೆ ನೀರು ಸಂಗ್ರಹವಾಯಿತು. ಕಳೆದ 15 ದಿನಗಳಿಂದ ನಿತ್ಯ ಸಂಜೆ ಮೋಡ ಕವಿದ ವಾತಾವರಣವಿದ್ದರೂ ಮಳೆ ಬಾರದೆ ಗುಡುಗು, ಮಿಂಚು ಮತ್ತು ಗಾಳಿಯ ಆರ್ಭಟವೇ ಇರುತ್ತಿತ್ತು. ಆದರೆ, ಗುರುವಾರ ಅಧಿಕ ಮಳೆಯಾಗುವುದರ ಮೂಲಕ ವರ್ಷದ ಮೊದಲ ಉತ್ತಮ ಮಳೆ ಸುರಿದಂತಾಗಿದೆ.

ಅಧಿಕ ಪ್ರಮಾಣದಲ್ಲಿ ಮಳೆ ಸುರಿದರೆ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದ ಬಳಿ ನೀರು ಸಂಗ್ರಹವಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಾರೆ. ಕಳೆದ ನಾಲ್ಕು ವರ್ಷದಿಂದ ಈ ಸಮಸ್ಯೆ ಇದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬನಶ್ರೀ ಕಾಂಪ್ಲೆಕ್ಸ್ ಬಳಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಸ್ಥಳೀಯ ಕೆಲ ಅಂಗಡಿಗಳಿಗೂ ನೀರು ನುಗ್ಗಿತು. ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ಸಮರ್ಪಕ ಚರಂಡಿ ನಿರ್ಮಿಸದಿರುವುದು ಸಮಸ್ಯೆಗೆ ಕಾರಣ. ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿದರೂ ಸಮಸ್ಯೆ ತಪ್ಪುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಕೃಷಿ ಚಟುವಟಿಕೆಗೆ ಚಾಲನೆ

ಅಕ್ಕಿಆಲೂರ ಹಾಗೂ ಸುತ್ತಲಿನ ಮಲಗುಂದ, ಕಲ್ಲಾಪುರ, ಶ್ಯಾಡಗುಪ್ಪಿ, ಹಾವಣಗಿ, ಬಾಳಂಬೀಡ ಸೇರಿ ಅನೇಕ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net