

ಉಡುಪಿ: ಜಿಲ್ಲೆಯಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಶುಕ್ರವಾರ ದಿನವಿಡೀ ಮೋಡಕವಿದ ವಾತಾವರಣ, ಆಗಾಗ್ಗೆ ಉತ್ತಮ ಮಳೆಯಾಗುತ್ತಿದೆ.
ಜಿಲ್ಲೆಯ ಪ್ರಮುಖ ನದಿಗಳಾದ ಶಾಂಭವಿ, ಉದ್ಯಾವರ ಹೊಳೆ, ಸ್ವರ್ಣ ನದಿ, ಸೀತಾ ನದಿ, ಚಕ್ರಾ, ಕುಬ್ಜಾ, ವಾರಾಹಿ, ಸೌಪರ್ಣಿಕಾ, ಪಂಚಗಂಗಾವಳಿ ನದಿಗಳು ತುಂಬಿ ಹರಿಯುತ್ತಿವೆ. ಮಳೆಯೊಂದಿಗೆ ಆಗಾಗ್ಗೆ ಭಾರೀ ಗಾಳಿ ಬೀಸುತ್ತಿದ್ದು, ಅನೇಕ ಕಡೆಗಳಲ್ಲಿ ರಸ್ತೆ, ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಉದ್ಯಾವರ ಪಾಪನಾಶಿನಿ ನದಿ ಅಪಾಯಮಟ್ಟ ಮೀರಿದ್ದು, ನೆರೆ ಪೀಡಿತ ನದಿ ಪಾತ್ರದ ಕುದ್ರು ಮನೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಕಾಪು ತಾಲೂಕು ಮಲ್ಲಾರು, ಪಾದೆಬೆಟ್ಟು ಮತ್ತು ಏಣಗುಡ್ಡೆ ಗ್ರಾಮಗಳಲ್ಲಿ 26 ಮಂದಿ ಹಾಗೂ ಉಡುಪಿ ತಾಲೂಕಿನ ಕೆಮ್ತೂರು ಗ್ರಾಮದಲ್ಲಿ ನಾಲ್ವರನ್ನು ಸ್ಥಳಾಂತರಿಸಲಾಗಿದೆ. ಎಲ್ಲರೂ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 149.2 ಮಿ.ಮೀ. ಮಳೆಯಾಗಿದ್ದು, 31 ಮನೆಗಳಿಗೆ ಹಾನಿಯಾಗಿದೆ. ಹರ್ಕೂರು, ಸಿದ್ಧಾಪುರ, ಗುಲ್ವಾಡಿ, ಹರ್ಕೂರು, ಕಾಲ್ತೋಡು, ಕಂದಾವರ, ಅವಾಸೆಬೈಲು, ಕಂದಾವರ, ಕಟ್ಬೇಲ್ತೂರು, ನಾವುಂದ ಗ್ರಾಮದಲ್ಲಿ ತೋಟಗಾರಿಕಾ ಬೆಳೆ ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಅಪಾರ ಹಾನಿಯಾಗಿದೆ.
ಕಾರ್ಕಳ ತಾಲೂಕಿನಲ್ಲಿ 201.7, ಕುಂದಾಪುರದಲ್ಲಿ 124.6, ಉಡುಪಿಯಲ್ಲಿ 131.1, ಬೈಂದೂರಿನಲ್ಲಿ 113.8, ಬ್ರಹ್ಮಾವರದಲ್ಲಿ 136.6, ಕಾಪುವಿನಲ್ಲಿ 176.1, ಹೆಬ್ರಿಯಲ್ಲಿ 168.4 ಮಿ .ಮೀ. ಮಳೆ ಸುರಿದಿದೆ.