ನಗರದೆಲ್ಲೆಡೆ ಸಂಕ್ರಾಂತಿ ಸಡಗರ

11 A
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಮತ್ತು ನಗರದ ಹೊರವಲಯದಲ್ಲಿ ಬುಧವಾರ ಸುಗ್ಗಿಹಬ್ಬ ‘ಮಕರ ಸಂಕ್ರಾಂತಿ’ಯನ್ನು ಸಡಗರದಿಂದ ಆಚರಿಸಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಹೊಸ ಬದಲಾವಣೆ ಹಾಗೂ ಯಶಸ್ಸಿನ ನಿರೀಕ್ಷೆಯೊಂದಿಗೆ ಜನರು ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವಾಗಿ, ಸಂಕ್ರಾಂತಿಯನ್ನು ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯಲಾಗುವ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ನೀರೆಯರ ಸಂಖ್ಯೆಯೇ ಹೆಚ್ಚಾಗಿತ್ತು.

ಹೊಸ ಬಟ್ಟೆ ತೊಟ್ಟು ಗುಡಿಗಳಿಗೆ ಆಗಮಿಸಿದ್ದ ಮಹಿಳೆಯರು, ಯುವತಿಯರು ಹಾಗೂ ಹೆಣ್ಣು ಮಕ್ಕಳು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸುಗ್ಗಿ ಹಬ್ಬದ ಅಂಗವಾಗಿ ನಗರದ ಹಲವೆಡೆ ಗೋಪೂಜೆ ಮಾಡಲಾಯಿತು. ಗೋವುಗಳಿಗೆ ಎಳ್ಳು-ಬೆಲ್ಲ, ಬಾಳೆಹಣ್ಣು ಇತರ ಪದಾರ್ಥಗಳನ್ನು ತಿನ್ನಿಸಿ ಭಕ್ತಿ ಭಾವ ಮೆರೆದರು.

ಸಂಜೆಯಾಗುತ್ತಿದ್ದಂತೆ ಮಹಿಳೆಯರು, ಯುವತಿಯರು ಹಾಗೂ ಪುಟಾಣಿಗಳು ಸಂಬಂಧಿಕರು, ಬಂಧು-ಮಿತ್ರರು ಹಾಗೂ ನೆರೆಹೊರೆಯವರ ಮನೆಗಳಿಗೆ ತೆರಳಿ ಎಳ್ಳುಬೆಲ್ಲ ವಿನಿಮಯ ಮಾಡಿಕೊಂಡು, ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ನಗರದ ಹೊರವಲಯದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಮಾಡಿ ಪೂಜೆ ಸಲ್ಲಿಸಿ ಜಾನುವಾರುಗಳಿಗೆ ಪೂಜೆ ಸಲ್ಲಿಸಿದರು.

ಬೆಳಗ್ಗೆಯೇ ಜಾನುವಾರುಗಳನ್ನು ತೊಳೆದು ಅರಿಶಿಣ ಬಳಿದು ಪೂಜೆ ಸಲ್ಲಿಸಿದರು. ನಂತರ ಎಳ್ಳು, ಬೆಲ್ಲ, ಹಣ್ಣು, ಹಂಪಲು ನೀಡಿದರು. ನಂತರ ಮನೆ ಮಂದಿಯೆಲ್ಲ ಸೇರಿ ಎಳ್ಳು-ಬೆಲ್ಲ ತಿಂದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಇನ್ನು ಗ್ರಾಮೀಣ ವಾತಾವರಣ ಇರುವ ನಗರದ ಕೆ.ಜಿ.ಕೊಪ್ಪಲು, ತೊಣಚಿಕೊಪ್ಪಲು, ಕುಂಬಾರಕೊಪ್ಪಲು, ಪಡುವರಹಳ್ಳಿ, ಸುಣ್ಣದ ಕೇರಿ, ನಜರ್‌ಬಾದ್ ಸೇರಿದಂತೆ ಮುಂತಾದ ಬಡಾವಣೆಗಳಲ್ಲೂ ಗ್ರಾಮೀಣ ಸೊಗಡಿನಲ್ಲಿ ಸುಗ್ಗಿ ಹಬ್ಬ ಆಚರಿಸಲಾಯಿತು. ರಾಸುಗಳನ್ನು ತೊಳೆದು, ಸಿಂಗಾರಗೊಳಿಸಿ ಪೂಜೆ ಸಲ್ಲಿಸಲಾಯಿತು.

ನಗರದ ಚಾಮುಂಡಿಬೆಟ್ಟ, ಕೋಟೆ ಆಂಜನೇಯಸ್ವಾಮಿ, ನೂರೊಂದು ಗಣಪತಿ, ಯೋಗಾನರಸಿಂಹಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಹೀಗಾಗಿ ದೇವಸ್ಥಾನದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು.

ಹಬ್ಬದ ಪ್ರಯುಕ್ತ ಸಂಜೆ ಜಾನುವಾರುಗಳನ್ನು ಕಿಚ್ಚು ಹಾಯಿಸುವ ವಿಶೇಷ ಕಾರ್ಯಕ್ರಮ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಂಡು ಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net