

ಕೆ.ಎಂ.ದೊಡ್ಡಿ: ಪರವಾನಗಿ ಪಡೆಯದೆ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸಮೀಪದ ಹೊನ್ನಾಯಕನಹಳ್ಳಿ ಗ್ರಾಮದ ಗ್ರಾಮಸ್ಥರು ತೊರೆಬೊಮ್ಮನಹಳ್ಳಿ ಗ್ರಾ.ಪಂ. ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹೊನ್ನಾಯಕನಹಳ್ಳಿ ಗ್ರಾಮದ ಎಚ್.ಕೆ. ನಿಜಲಿಂಗಯ್ಯ ಅವರು ಮನೆ ಕಟ್ಟಡದ ಲೈಸನ್ಸ್ (ಪರವಾನಗಿ) ಪಡೆಯದೆ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಗ್ರಾಮದ ಎಚ್.ಕೆ. ಅಂದಾನಿ, ಎಚ್.ಸಿ.ನಾಗೇಂದ್ರ, ಎಚ್.ಎನ್. ಮಹೇಶ್ ಅವರು ಈ ಹಿಂದೆ ಗ್ರಾಮ ಪಂಚಾಯಿತಿಗೆ ತಕರಾರು ಅರ್ಜಿ ಸಲ್ಲಿಸಿದ್ದು, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಯಾವುದೇ ಕ್ರಮ ವಹಿಸದೆ ಕೈಚಲ್ಲಿತ್ತು.
ಬಳಿಕ ತಾಲೂಕು ಪಂಚಾಯತಿ ನ್ಯಾಯಲಯದಲ್ಲಿ ದಾವೆ ಹೂಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಲೈಸನ್ಸ್ ಪಡೆದು ಮನೆ ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಈ ಸಂಬಂಧ ಪಂಚಾಯಿತಿ ಆದೇಶವನ್ನು ಧಿಕ್ಕರಿಸಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಹಲವು ಗ್ರಾಮಸ್ಥರು ತೊರೆಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಬಳಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರ ನಾಗೇಂದ್ರ ಮಾತನಾಡಿ, ಹೊನ್ನಯಕನಹಳ್ಳಿ ಗ್ರಾಮದ ಎಚ್.ಕೆ. ನಿಜಲಿಂಗಯ್ಯ ಅವರು ಪಂಚಾಯಿತಿ ಆದೇಶವನ್ನು ಧಿಕ್ಕರಿಸಿ ರಸ್ತೆಗೆ ಜಾಗ ಬಿಡದೆ ಅಕ್ರಮವಾಗಿ ಮನೆ ನಿರ್ಮಾಣ ಕೆಲಸ ಆರಂಭಿಸುತ್ತಿದ್ದಾರೆ. ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಮಗಾರಿ ತಡೆದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪಿಡಿಒ ಅನುಕುಮಾರ್ ಆಗಮಿಸಿ ಎದುರುದಾರರನ್ನು ಕರೆಯಿಸಿ ಕಾನೂನು ಬಗ್ಗೆ ತಿಳಿವಳಿಕೆ ನೀಡಿ ಲೈಸನ್ಸ್ ಪಡೆಯುವವರಿಗೂ ಮನೆ ನಿರ್ಮಾಣ ಮಾಡದಂತೆ ಸೂಚನೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಲೈಸೆನ್ಸ್ ಪಡೆಯದೆ ಮನೆಗಳ ನಿರ್ಮಾಣ ಮಾಡುತ್ತಿರುವವರ ಬಗ್ಗೆ ಮಾಹಿತಿ ಪಡೆದು ಕ್ರಮ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಚ್.ಸಿ ನಾಗೇಂದ್ರ, ಎಚ್.ಕೆ.ಅಂದಾನಿ, ಎಚ್.ಎನ್ ಮಹೇಶ್, ಕರಿಗೌಡ, ಶಿವಲಿಂಗಯ್ಯ, ನಾಗರಾಜು, ರಘು, ವೆಂಕಟಲಕ್ಷಮ್ಮ, ಲಕ್ಷಮ್ಮ, ಶೃತಿ, ಗೀತಾ, ಸುಜಾತ ಸೇರಿದಂತೆ ಹಲವರು ಇದ್ದರು.