

ತಿ.ನರಸೀಪುರ; ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜಗಜಿತ್ ಸಿಂಗ್ ದಲೆವಾಲ ಹೋರಾಟ ಬೆಂಬಲಿಸಿ ಡಿ.31ರಂದು ಸಂಜೆ 6 ಗಂಟೆಗೆ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ಮೈಸೂರಿನ ಗನ್‌ಹೌಸ್ ವೃತ್ತದ ಬಳಿ ಪಂಜಿನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಹೇಳಿದರು.
ಹೋರಾಟದ ಪೂರ್ವಭಾವಿಯಾಗಿ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರೈತರು ಕೇಂದ್ರ ಸರ್ಕಾರದಿಂದ ಭಿಕ್ಷೆ ಕೇಳುತ್ತಿಲ್ಲ. ಬದಲಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕೆಂದು ಹೋರಾಟ ಮಾಡಲಾಗುತ್ತಿದೆ. ನಮ್ಮಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರು ನಿದ್ರೆ ಮಾಡದೆ ಸರ್ಕಾರದ ಗಮನ ಸೆಳೆಯಬೇಕು. ಇಲ್ಲದಿದ್ದರೆ ಹಳ್ಳಿಗಳಿಗೆ ಬಂದರೆ ನಿಮ್ಮನ್ನು ಹೊರಗೆ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ರೈತ ನಾಯಕ 31 ದಿನದಿಂದ ಉಪವಾಸ ಕುಳಿತಿದ್ದಾರೆ. ಜನಪ್ರತಿನಿಧಿಗಳ ಕಣ್ಣಿಗೆ ರೈತರ ಚಳವಳಿ ಕಾಣುತ್ತಿಲ್ಲ. ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆಯೇ ಎಂದು ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಅಂತಹ ಸರ್ಕಾರವನ್ನು ಎಚ್ಚರಗೊಳಿಸಲು ಪ್ರತಿ ಹಳ್ಳಿ ಯಲ್ಲಿ ಮೇಣದಬತ್ತಿ ಪ್ರತಿಭಟನೆ ಮಾಡುವ ಮೂಲಕ ರೈತರನ್ನು ಜಾಗೃತಿಗೊಳಿಸಲಾಗುವುದು ಎಂದರು.
ಭತ್ತದ ಇಳುವರಿ ಬಂದಿದ್ದರೂ ಬೆಲೆ ಕುಸಿತವಾಗಿದೆ. ಹಾಗಾಗಿ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕು. ಎಂಎಸ್‌ಪಿ ದರಕ್ಕೆ ಹೆಚ್ಚುವರಿಯಾಗಿ ಕುಂಟಾಲ್ಗೆ 500 ರೂ.ಪ್ರೋತ್ಸಾಹ ದನ ನೀಡಿ ಎಂದು ಒತ್ತಾಯಿಸಲಾಗುತ್ತಿದೆಯಾದರೂ ಜಿಲ್ಲಾ ಮಂತ್ರಿಗಳು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಪಿ. ಪರಶಿವಮೂರ್ತಿ, ಟೌನ್ ಅಧ್ಯಕ್ಷ ಅಪ್ಪಣ್ಣ, ರೈತ ಮುಖಂಡರಾದ ಪ್ರದೀಪ್‌ಕುಮಾರ್ ಕುರುಬೂರು, ಆದಿಬೆಟ್ಟಳ್ಳಿ ನಂಜುಂಡಸ್ವಾಮಿ, ತರಕಾರಿ ನಿಂಗರಾಜು, ವಾಚ್ ಕುಮಾರ್, ಕೆಇಬಿ ಯೋಗೇಶ, ಕರೋಹಟ್ಟಿ ಉಮೇಶ್ ಹಾಗೂ ಮಾದಪ್ಪ ಇದ್ದರು.